ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಸಿಹಿಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂದು ರಜೆ ಪಡೆಯುವುದು ಸುಗಮವಾಗಲಿದ್ದು, ಈ ಕುರಿತು ಇಲಾಖೆಯು ಮಹತ್ವದ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಜಾರಿಗಾಗಿ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ, ತಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನಹರಿಸಲು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಈ ಆದೇಶದ ಮೂಲಕ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ನಿರಂತರವಾಗಿ ಕಠಿಣ ಮತ್ತು ಸವಾಲಿನ ಸಂದರ್ಭಗಳಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರ ಮನೋಬಲವನ್ನು ಹೆಚ್ಚಿಸುವ ಸದುದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂತಹ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಸಿಬ್ಬಂದಿ ಭಾವನಾತ್ಮಕವಾಗಿ ಪುನಃಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಇದು ಕರ್ತವ್ಯ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ನೆರವಾಗಲಿದೆ. ಈ ಮಾನವೀಯ ಕ್ರಮವು ಪೊಲೀಸ್ ಸಿಬ್ಬಂದಿಯ ಪರಿಶ್ರಮವನ್ನು ಗೌರವಿಸುವುದರ ಜೊತೆಗೆ, ಇಲಾಖೆಯಲ್ಲಿನ ಶಿಸ್ತು ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸಲಿದೆ ಎಂದು ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಂದರ್ಭಿಕ ರಜೆ ಕೋರಿದಲ್ಲಿ, ತಪ್ಪದೇ ರಜೆ ಮಂಜೂರು ಮಾಡುವಂತೆ ಎಲ್ಲಾ ಘಟಕದ ಅಧಿಕಾರಿಗಳಿಗೆ ಡಿಜಿ – ಐಜಿಪಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಹೊಸ ಆದೇಶದಿಂದಾಗಿ ಬಿಡುವಿಲ್ಲದ ಕೆಲಸದ ನಡುವೆಯೂ, ತಮ್ಮ ಜೀವನದ ವಿಶೇಷ ದಿನಗಳನ್ನು ಕುಟುಂಬದೊಂದಿಗೆ ಸಂಭ್ರಮಿಸಲು ರಾಜ್ಯದ ಪೊಲೀಸ್ ಸಿಬ್ಬಂದಿಗೆ ಸೂಕ್ತ ಅವಕಾಶ ದೊರೆತಂತಾಗಿದೆ.
ರಾಜ್ಯ ಪೊಲೀಸ್ ಸಿಬ್ಬಂದಿಗೆ ಭರ್ಜರಿ ಸಿಹಿಸುದ್ದಿ: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ
Previous Articleಡ್ರಗ್ಸ್ ದಂಧೆಯಲ್ಲಿ ಯಾರಿದ್ದಾರೆ ನೋಡಿ
Next Article ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಮರ.

