ಬೆಂಗಳೂರು,
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅರಿವು ಮೂಡಿಸುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ವಿರುದ್ಧವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿರ್ಬಂಧ ಮಾಡಲಾಗಿದೆ.
ಕೂಡಲೇ ಬಸ್‌ಗಳ ಮೇಲಿನ ಜಾಹೀರಾತು ತೆಗೆದು ಹಾಕಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚನೆ ನೀಡಿದ್ದಾರೆ.
ರಾಜ್ಯ ಎಲ್ಲಾ ಸಾರಿಗೆ ಬಸ್‌ಗಳ ಮೇಲೆಯೂ ಆದಾಯ ದೃಷ್ಟಿಯಿಂದ ಜಾಹೀರಾತು ಅಳವಡಿಸಲಾಗಿದೆ. ಈ ಪೈಕಿ ತಂಬಾಕು ಉತ್ಪನ್ನಗಳ ಜಾಹೀರಾತು ಇದ್ದವು. ಈ ಬಗ್ಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಹಲವೆಡೆ ಬಸ್ ಮೇಲಿನ ಜಾಹೀರಾತುಗಳನ್ನು ಕಿತ್ತು ಹಾಕಲಾಗಿತ್ತು. ಈ ಹಿನ್ನೆಲೆ ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧ ಮಾಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಬಸ್ ನಿಲ್ದಾಣಗಳಲ್ಲಿಯೂ ತಂಬಾಕು ಜಾಹೀರಾತು ಇರುವಂತಿಲ್ಲ
ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿಯವರು ಸಾರಿಗೆ ಇಲಾಖೆಗಳಿಗೆ ಸೂಚನಾ ಪತ್ರ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ, ಈ ಕೂಡಲೇ ಜಾರಿಗೆ ಬರುವಂತೆ, ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ / ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡದಂತೆ ಸೂಚಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಸುಗಳಲ್ಲಿ / ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ಅದನ್ನು ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಸದರಿ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

