ಬೆಂಗಳೂರು,
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಖ್ಯಾತ ನಟರೊಬ್ಬರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚಿನ ಅತ್ಯಂತ ಯಶಸ್ವಿ ಸಿನಿಮಾ ಕಾಂತಾರ ಚಾಪ್ಟರ್ 1’ ನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಗಮನ ಸೆಳೆದ ಕೇರಳದ ಬಹುಭಾಷಾ ನಟ ಜಯರಾಮ್ ಅವರನ್ನು ಪ್ರಕರಣದ ಬಗ್ಗೆ ತನಿಖೆಗೆ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ದ ಅಧಿಕಾರಿಗಳು ವಿಚಾರಣೆ ತೀವ್ರ ನಡೆಸಿದ್ದಾರೆ.
ಕನ್ನಡ, ಮಲಯಾಳಂ, ತಮಿಳು, ತೆಲುಗು ಬಾಲಿವುಡ್ ಮೊದಲಾದ ಚಿತ್ರರಂಗದಲ್ಲಿ ಜಯರಾಮ್ ಸಕ್ರಿಯರಾಗಿದ್ದಾರೆ.
ಅವರು ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಜೊತೆ ಜಯರಾಮ್ ನಂಟು ಹೊಂದಿರುವ ಅನುಮಾನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ.
ಕಳೆದ 2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ.
ಆತನ ಜೊತೆ ಜಯರಾಮ್ ಉತ್ತಮ ಒಡನಾಟ ಹೊಂದಿರುವುದರಿಂದ ವಿಚಾರಣೆ ಎದುರಿಸಬೇಕಾಗಿದೆ.
ಉನ್ನಿಕೃಷ್ಣನ್ 2019ರಲ್ಲಿ ಚೆನ್ನೈನಲ್ಲಿ ಆಯೋಜನೆ ಮಾಡಿದ್ದ ಪೂಜೆಯಲ್ಲಿ ಜಯರಾಮ್ ಕೂಡ ಭಾಗಿಯಾಗಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಎಸ್ಐಟಿ ಗಮನಕ್ಕೂ ಬಂದಿದ್ದು, ವಿಚಾರಣೆ ನಡೆಸಿದ್ದಾರೆ.
ಈ ರೀತಿ ಉನ್ನಿಕೃಷ್ಣನ್ ಅವರು ಆಯೋಜನೆ ಮಾಡಿದ ಯಾವ್ಯಾವ ಪೂಜೆಗಳಲ್ಲಿ ಎಷ್ಟು ಬಾರಿ ಜಯರಾಮ್ ಹಾಜರಾಗಿದ್ದರು ಎಂದು ಪ್ರಶ್ನಿಸಲಾಗಿದೆ. ಆರೋಪಿ ಜೊತೆ ಇವರಿಗೆ ಆರ್ಥಿಕ ಅಥವಾ ವೈಯಕ್ತಿಕ ಸಂಬಂಧವಿದೆಯೇ ಎಂದು ಕೇಳಲಾಗಿದೆ.

