ಬೆಂಗಳೂರು,
ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮ ಕೆಲವು ಖೈದಿಗಳಿಗೆ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳಿಗೆ ಬ್ರೇಕ್ ಹಾಕಲು ಕಾರ್ಯಯೋಜನೆ ರೂಪಿಸಿರುವ ಕಾರಾಗೃಹ ಮತ್ತು ಸುಧಾರಣಾ ಸೇವಾ ಡಿಜಿಪಿ ಅಲೋಕ್ ಕುಮಾರ್ ವರ್ಗಾವಣೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ರಾಜ್ಯದ ವಿವಿಧ ಜೈಲುಗಳಲ್ಲಿ ಹಲವಾರು ವರ್ಷಗಳಿಂದ ಬೀಡು ಬಿಟ್ಟಿರುವ ಸಿಬ್ಬಂದಿಯ ವರ್ಗಾವಣೆಗೆ ತೀರ್ಮಾನಿಸಿದ್ದಾರೆ.
ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗಾ ಮತ್ತು ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ವರ್ಷಾನುಗಟ್ಟಲೆಯಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಸಿದ್ದತೆ ಕೈಗೊಂಡಿದ್ದಾರೆ.ಇದಕ್ಕೆ ಗೃಹ ಇಲಾಖೆ ಅನುಮತಿ ಪಡೆದುಕೊಂಡಿರುವ ಅವರು
ಫೆಬ್ರವರಿ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಿದ್ದಾರೆ
ಇತ್ತೀಚೆಗೆ ಖೈದಿಗಳಿಗೆ ರಾಜಾತಿಥ್ಯ ನೀಡಿ ಅತಿ ಹೆಚ್ಚು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳ ಮೇಲೆ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (ಒಒಡಿ) ಮೇಲೆ ಬಂದಿರುವ ಅಧಿಕಾರಿಗಳಿಗೂ ಈಗ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸಿಬ್ಬಂದಿಗಳನ್ನು ಆಗಾಗ ಬದಲಾವಣೆ ಮಾಡುವುದರಿಂದ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯಬಹುದು ಹಾಗೂ ಶಿಸ್ತನ್ನು ಕಾಪಾಡಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.
ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ.
Previous Articleಶಾರೂಖ್ ಖಾನ್ ಪುತ್ರನಿಗೆ ರಿಲೀಫ್!
Next Article ಹೈಕಮಾಂಡ್ ನಿಂದ ಸಂದೇಶ ಬರುತ್ತಾ..?

