ಬೆಂಗಳೂರು/ಮಂಗಳೂರು:
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಮೆಟ್ರೋ ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ, ಈ ಬಗ್ಗೆ ನಮ್ಮ ಅಭಿಪ್ರಾಯವನ್ನೂ ಕೇಳಿಲ್ಲ” ಎಂದು ಅವರು ತಿಳಿಸಿದ್ದಾರೆ.
ಶನಿವಾರ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದರ ಏರಿಕೆಯ ಸಂಪೂರ್ಣ ಹೊಣೆಗಾರಿಕೆ ಮತ್ತು ಪ್ರಕ್ರಿಯೆಯ ಬಗ್ಗೆ ವಿವರಣೆ ನೀಡಿದರು. ಜೊತೆಗೆ, ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಕೇಂದ್ರದ ಸಮಿತಿಯದ್ದೇ ಅಂತಿಮ ನಿರ್ಧಾರ
“ಮೆಟ್ರೋ ದರವನ್ನು ನಿರ್ಧಾರ ಮಾಡಲು ಒಂದು ಪ್ರತ್ಯೇಕ ಸಮಿತಿ ಇರುತ್ತದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ದರ ಏರಿಕೆಯ ಯಾವುದೇ ಫೈಲ್ (ಕಡತ) ನನ್ನ ಬಳಿಗೆ ಬಂದಿಲ್ಲ ಹಾಗೂ ನಾನು ಅದಕ್ಕೆ ಸಹಿ ಹಾಕಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಅಥವಾ ನಾನು ಇದಕ್ಕೆ ಹೇಗೆ ಕಾರಣವಾಗಲು ಸಾಧ್ಯ?” ಎಂದು ಡಿಸಿಎಂ ಪ್ರಶ್ನಿಸಿದರು.
ಸೋಮವಾರ ಅಧಿಕಾರಿಗಳೊಂದಿಗೆ ಸಭೆ
ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ ಎಂದ ಅವರು, “ನಮಗೆ ಜನರಿಗೆ ತೊಂದರೆ ನೀಡಲು ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರವೇ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಹಾಗೂ ದರ ಪರಿಷ್ಕರಣೆಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಿದ್ದೇನೆ” ಎಂದು ಭರವಸೆ ನೀಡಿದರು.
ತೇಜಸ್ವಿ ಸೂರ್ಯಗೆ ಅನುಭವ ಕಡಿಮೆ!
ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ದರ ಏರಿಕೆ ಸಾಧ್ಯವೇ ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಶಿವಕುಮಾರ್, “ಪಾಪ ಅವರಿಗೆ (ತೇಜಸ್ವಿ ಸೂರ್ಯ) ಇನ್ನೂ ಅನುಭವ ಕಡಿಮೆ. ಬರೀ ಟ್ವೀಟ್ ಮಾಡುವುದು ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡುವುದಕ್ಕಷ್ಟೇ ಅವರು ಸೀಮಿತವಾಗಿದ್ದಾರೆ. ಬರೀ ಖಾಲಿ ಮಾತುಗಳನ್ನು ಆಡುವುದು ಬೇಡ” ಎಂದು ಟೀಕಿಸಿದರು.
ಮುಂದುವರಿದು, “ಬಿಜೆಪಿಯವರು ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಸಂಸದರಾಗಿ ಅವರು ರಾಜ್ಯಕ್ಕೆ ಒಂದು ದಿನವಾದರೂ ಅನುದಾನ ತಂದಿದ್ದಾರಾ? ಸುಮ್ಮನೆ ಖಾಲಿ ಟ್ರಂಕ್ ವಿಚಾರ ಮಾತನಾಡುವುದು ಸರಿಯಲ್ಲ” ಎಂದು ವಾಗ್ದಾಳಿ ನಡೆಸಿದರು.


1 ಟಿಪ್ಪಣಿ
Votre pharmacie prГ©fГ©rГ©e pour une santГ© sereine et protГ©gГ©e – https://www.keskeces.com/pharmacie-de-garde/58470-magny-cours.html , La pharmacie qui vous simplifie la vie et prend soin de vous .