ಬೆಂಗಳೂರು: ಸಿಲಿಕಾನ್ ಸಿಟಿಯ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆಯನ್ನು ತಡೆಹಿಡಿಯುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಮರು ಲೆಕ್ಕಾಚಾರಕ್ಕೆ ಸೂಚನೆ
ಮೆಟ್ರೋ ದರ ಏರಿಕೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಡಿಸಿಎಂ, ದರ ಪಟ್ಟಿಯನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದ್ದಾರೆ. “ದೆಹಲಿ ಮೆಟ್ರೋ ಮಾದರಿಯ ಸೂತ್ರಗಳನ್ನು ಅಳವಡಿಸಿಕೊಂಡು ಹೊಸದಾಗಿ ಲೆಕ್ಕಾಚಾರ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲಿಯವರೆಗೆ ದರ ಏರಿಕೆ ಜಾರಿಗೆ ಬರುವುದಿಲ್ಲ” ಎಂದು ಅವರು ತಿಳಿಸಿದರು.
ಕೇಂದ್ರದ ವಿರುದ್ಧ ಕಿಡಿ
ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿದ ಡಿಕೆಶಿ, “ಕೇಂದ್ರ ಸರ್ಕಾರ ಕಳುಹಿಸಿರುವ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ. ದರ ನಿಗದಿ ಮಾಡುವ ಅಧಿಕಾರ ಕೇವಲ ದರ ಪರಿಷ್ಕರಣಾ ಸಮಿತಿಗೆ ಮಾತ್ರ ಇರುತ್ತದೆ. ಇದರಲ್ಲಿ ಕೇಂದ್ರಕ್ಕೆ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ” ಎಂದು ಗುಡುಗಿದ್ದಾರೆ.
ರಾಜ್ಯ ಸರ್ಕಾರವು ಮೆಟ್ರೋಗಾಗಿ ನೀಡಿರುವ ಆರ್ಥಿಕ ನೆರವಿನ ಬಗ್ಗೆ ಮಾಹಿತಿ ನೀಡಿದ ಡಿಸಿಎಂ, ಈ ಕೆಳಗಿನ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.
* ನಷ್ಟ ಮರುಪಾವತಿ (Cash Loss): 1,064.32 ಕೋಟಿ ರೂ.
* ಸಾಲ ಮರುಪಾವತಿ: 4,002.23 ಕೋಟಿ ರೂ.
* ಒಟ್ಟು ಒದಗಿಸಿದ ಹಣ: 5,066.55 ಕೋಟಿ ರೂ.
ಬೆಂಗಳೂರು ಮೆಟ್ರೋಗೆ ರಾಜ್ಯವೇ ಭದ್ರತೆ ಒದಗಿಸುತ್ತಿದೆ ಮತ್ತು ಜಿಎಸ್‌ಟಿಯನ್ನೂ ಪಾವತಿಸುತ್ತಿದೆ. ಇಷ್ಟೆಲ್ಲಾ ಹೊರೆ ಹೊರುತ್ತಿರುವಾಗ ಜನರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು.
ವಿವಾದಕ್ಕೆ ಕಾರಣವೇನು?
ದಿನಾಂಕ 09.02.2025 ರಂದು ಮಾಡಲಾಗಿದ್ದ ಶಿಫಾರಸ್ಸಿನಂತೆ ಈ ವರ್ಷ ಶೇ.5 ರಷ್ಟು ದರ ಏರಿಕೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಜನರ ಹಿತದೃಷ್ಟಿಯಿಂದ ಮತ್ತು ತಾಂತ್ರಿಕ ಮರು ಲೆಕ್ಕಾಚಾರದ ಅಗತ್ಯವಿರುವುದರಿಂದ ಇದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಹೊಸ ಸಮಿತಿ ರಚನೆಯಾಗುವ ತನಕ ಯಾವುದೇ ದರ ಏರಿಕೆ ಅಂತಿಮವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

1 ಟಿಪ್ಪಣಿ
Votre partenaire santГ© fiable, disponible et toujours Г l’écoute – https://alexipharmaque.eu/ville/magny-cours/ , La pharmacie qui rend la santГ© accessible et agrГ©able .