ಬೆಂಗಳೂರು.
ಲೋಕಸಭೆಯ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಇವರ ವಿರುದ್ಧ ರಾಜ್ಯ ಬಿಜೆಪಿ ದಾಖಲು ಮಾಡಿದ್ದ ಖಾಸಗಿ ದೂರನ್ನು ರದ್ದುಪಡಿಸಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರ ಘೋಷಣೆಗಳಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಲಾಗಿತ್ತು.
ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ ಶೇಕಡಾ 40 ರಷ್ಟು ಕಮಿಷನ್/ಲಂಚವನ್ನು ವಿಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿತ್ತು. ಇದರೊಂದಿಗೆ, ಬಿಜೆಪಿ ಸರ್ಕಾರದ ‘ಕರಪ್ಶನ್ ರೇಟ್ ಕಾರ್ಡ್’ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಇದನ್ನು ರಾಹುಲ್ ಗಾಂಧಿ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಲಂಚ ಆರೋಪಕ್ಕೆ ಪಕ್ಷವನ್ನು ತಳುಕು ಹಾಕಿರುವ ಕ್ರಮ ಸರಿಯಲ್ಲ ಎಂದು ಹೇಳಿತ್ತು.
ಇಷ್ಟೇ ಅಲ್ಲದೆ ಇದರ ವಿರುದ್ಧ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ (ಸಿಎಂ) ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ ಹಾಗೂ ಪಕ್ಷದ ಕಚೇರಿ ಕಾರ್ಯದರ್ಶಿ ಕೇಶವ ಪ್ರಸಾದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರಾಹುಲ್ ಗಾಂಧಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿರುವ ಖಾಸಗಿ ದೂರು ರದ್ದುಪಡಿಸಿದರು.
ಆದರೆ, ಸರ್ಕಾರದ ವಿರುದ್ಧ ಟೀಕೆ ಮಾಡಲಾಗಿದೆಯೇ ವಿನಃ ನೇರವಾಗಿ ಬಿಜೆಪಿ ವಿರುದ್ಧ ಅಲ್ಲ. ಸರ್ಕಾರದ ವಿರುದ್ಧ ಮಾಡುವ ಟೀಕೆಗಳು ಮಾನನಷ್ಟ ಮೊಕದ್ದಮೆ ಅಡಿ ಬರುವುದಿಲ್ಲ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಕ್ರಮಗಳು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.
Previous Articleಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!
Next Article ಚಿನ್ನದ ವ್ಯಾಪಾರಿಯ ಖತರ್ನಾಕ್ ಐಡಿಯಾ!

