ಬೆಂಗಳೂರು,
ಅಧಿಕಾರ ಹಂಚಿಕೆ ಕುರಿತಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆದಿರುವ ಬೆಳವಣಿಗೆಗಳು ಇದೀಗ ನಿರ್ಣಾಯಕ ಘಟ್ಟ ತಲುಪಿವೆ. ಎಲ್ಲ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಗಮನಹರಿಸಿದ್ದು ಸದ್ಯದಲ್ಲಿಯೇ ಈ ಕುರಿತಂತೆ ತನ್ನ ತೀರ್ಮಾನ ಪ್ರಕಟಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾಯಕತ್ವ ಕುರಿತಂತೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಮಾಜಿ ಮಂತ್ರಿ ಕೆ ಎನ್ ರಾಜಣ್ಣ ಅವರೊಂದಿಗೆ ಕೆಲವು ಶಾಸಕರ ನಿಯೋಗ ದೆಹಲಿಗೆ ಆಗಮಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುಧೀರ್ಘ ಮಾತುಕತೆ ನಡೆಸಿತು.
ಈ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂತ್ರಿ ಸತೀಶ್ ಜಾರಕಿಹೊಳಿ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾವುಗಳೆಲ್ಲರೂ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಈ ವಿದ್ಯಮಾನಗಳಿಂದ ಸರ್ಕಾರ ಮತ್ತು ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದೇವೆ ಎಂದರು.
ಹಿರಿಯ ನಾಯಕರಾದ ಖರ್ಗೆ ಅವರು ಹೈಕಮಾಂಡ್ ಗೆ ಎಲ್ಲಾ ವಿಚಾರಗಳ ಅರಿವಿದೆ ಆದಷ್ಟು ಶೀಘ್ರ ಹೈಕಮಾಂಡ್ ಈ ವಿಚಾರವಾಗಿ ತನ್ನ ತೀರ್ಮಾನ ಪ್ರಕಟಿಸಲಿದೆ ಯಾರನ್ನು ಆತಂಕ ಬೇಡ ಎಂದು ಭರವಸೆ ನೀಡಿರುವುದಾಗಿ ತಿಳಿಸಿದರು
ಮುಖ್ಯಮಂತ್ರಿ ಬದಲಾವಣೆಯೋ ಅಥವಾ ಇನ್ನಾವುದೋ ನಿರ್ಧಾರವೋ ನಮಗೆ ಗೊತ್ತಿಲ್ಲ ಖರ್ಗೆ ಅವರು ಅದನ್ನು ಸ್ಪಷ್ಟಪಡಿಸಲಿಲ್ಲ ಬದಲಾಗಿ ಆದಷ್ಟು ಶೀಘ್ರವೇ ಎಲ್ಲವೂ ಇತ್ಯರ್ಥ ಗೊಳ್ಳಲಿದೆ ಹೈ ಕಮಾಂಡ್ ತಮ್ಮ ತೀರ್ಮಾನ ಪ್ರಕಟಿಸಲಿದೆ ಎಂದು ಹೇಳಿದರು ಎಂದು ಸ್ಪಷ್ಟಪಡಿಸಿದರು.
ಈ ಭೇಟಿಯ ಸಮಯದಲ್ಲಿ ಹಲವಾರು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ ಆದರೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದರು.
ಬಗೆಹರಿಸಬೇಕು:
ಇದೇ ವೇಳೆ ಮಾತನಾಡಿದ ಮಾಜಿ ಮಂತ್ರಿ ಕೆ ಎನ್ ರಾಜಣ್ಣ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರುವಷನಾಯಕತ್ವದ ಗೊಂದಲವನ್ನು ಹೈಕಮಾಂಡ್ ಶೀಘ್ರವೇ ಇತ್ಯರ್ಥ ಪಡಿಸಬೇಕು. ಇಲ್ಲವಾದರೆ ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮವಾಗಲಿದೆ ಎಂದು ಖರ್ಗೆ ಅವರಲ್ಲಿ ಹೇಳಿರುವುದಾಗಿ ತಿಳಿಸಿದರು.

