ಭೂಪಾಲ್:
ದೇಶದಲ್ಲಿ ಇದೀಗ ಮತ್ತೊಂದು ದೇವಾಲಯ ಹಾಗೂ ಮಸೀದಿ ವಿವಾದ ಸೃಷ್ಟಿಯಾಗಿದೆ.ಪುರಾತತ್ವ ಸಂಶೋಧನಾ ಇಲಾಖೆ ನೀಡಿರುವ ಉತ್ಖನನ ವರದಿ ಈ ವಿವಾದಕ್ಕೆ ತೀವ್ರ ಸ್ವರೂಪ ನೀಡಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್ಶಾಲಾ ಸಂಕೀರ್ಣದೊಳಗೆ ಇರುವ ಕಮಲ್ ಮೌಲಾ ಮಸೀದಿ ಯನ್ನು ಪ್ರಾಚೀನ ದೇವಾಲಯದ ಅವಶೇಷಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿ ಹೇಳಿದೆ.
ಸಂಶೋಧನೆ ಹಾಗೂ ಅಧ್ಯಯನ ವರದಿಯಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ವಿವರಿಸಲಾಗಿದೆ.
ವೈಜ್ಞಾನಿಕ ತನಿಖೆ, ಸಮೀಕ್ಷೆಗಳು, ಉತ್ಖನನಗಳು, ಉತ್ಖನನ ಅವಶೇಷಗಳ ಅಧ್ಯಯನ ಮತ್ತು ವಾಸ್ತುಶಿಲ್ಪದ ರಚನೆಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ವಿಶ್ಲೇಷಣೆಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಪುರಾತತ್ವ ಇಲಾಖೆ ಹೇಳಿದೆ.
ಉತ್ಖನನದ ಸಮಯದಲ್ಲಿ ಒಟ್ಟು 94 ಶಿಲ್ಪಗಳು ಮತ್ತು ಅವುಗಳ ಅವಶೇಷಗಳು ಕಂಡುಬಂದವು, ಅವುಗಳಲ್ಲಿ ಹಲವು ಹಾನಿಗೊಳಗಾಗಿದ್ದವು. ಇವುಗಳಲ್ಲಿ ಗಣೇಶ, ಬ್ರಹ್ಮ, ನರಸಿಂಹ ಮತ್ತು ಭೈರವ ಸೇರಿದಂತೆ ಹಲವಾರು ದೇವತೆಗಳ ಕೆತ್ತನೆಗಳು ಹಾಗೂ ಮಾನವ ಮತ್ತು ಪ್ರಾಣಿಗಳ ಆಕೃತಿಗಳು ಸೇರಿವೆ. ಈ ಸ್ಥಳವು ಸರಸ್ವತಿ ದೇವಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿರಬಹುದು ಎಂದು ವರದಿ ತಿಳಿಸಿದೆ.
ಪರ್ಮಾರ್ ರಾಜವಂಶದ ಹಿಂದಿನದು ಮತ್ತು ರಾಜ ಭೋಜ್ ಮತ್ತು ಅವರ ಪೂರ್ವಜರಿಂದ ನಿರ್ಮಿಸಲ್ಪಟ್ಟಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಈ ರಚನೆಯು ಸರಿಸುಮಾರು 950 ರಿಂದ 1,000 ವರ್ಷಗಳಷ್ಟು ಹಳೆಯದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

