ಬೆಂಗಳೂರು,
ಮಹಾನಗರ ಬೆಂಗಳೂರಿನ ಮಾರತ್‌ಹಳ್ಳಿ ಸಮೀಪದ ಯಮಲೂರಿನಲ್ಲಿ ನಡೆದಿದ್ದ ಬಿಲ್ಡರ್ ಮನೆಯ ಕಳ್ಳತನ ಪ್ರಕರಣದ ಪೊಲೀಸರಿಗೆ ಬಿಡಿಸಲಾಗದ ಕಗ್ಗಂಟಾಗಿ ಪರಿಣಮಿಸಿದೆ.
ಬಿಲ್ಡರ್ ಮನೆಯಿಂದ ಸುಮಾರು 18 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ನೇಪಾಳಿ ಮೂಲದ ಖದೀಮರ ಪತ್ತೆಗಾಗಿ ನೇಪಾಳಕ್ಕೆ ತೆರಳಿದ್ದ ವೈಟ್‌ಫೀಲ್ಡ್ ವಿಭಾಗದ ಪೊಲೀಸರ ನಾಲ್ಕು ತಂಡಗಳು ಒಂದು ತಿಂಗಳ ಸತತ ಹುಡುಕಾಟದ ನಂತರ ಬರಿಗೈಲಿ ಮರಳಿವೆ.
ಕಳೆದ ಜ. 25ರಂದು 18 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ನಡೆದಿದ್ದು, ಕೃತ್ಯ ಒಂದೂವರೆ ತಿಂಗಳು ಕಳೆದರೂ ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ನೇಪಾಳದ ಗಡಿ ದಾಟಿ ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳ ಫೋಟೋ ಹಿಡಿದುಕೊಂಡು ನೇಪಾಳದ ಗಂಜ್ ಹಾಗೂ ಅಕ್ಕಪಕ್ಕದ ಗುಡ್ಡಗಾಡು ಪ್ರದೇಶಗಳಲ್ಲಿ ಪೊಲೀಸರು ಮನೆಮನೆಗೂ ತೆರಳಿ ತಪಾಸಣೆ ನಡೆಸಿದ್ದಾರೆ.
ಕಠಿಣವಾದ ಭೌಗೋಳಿಕ ಪರಿಸ್ಥಿತಿಗಳ ನಡುವೆಯೂ ನಡೆಸಿದ ಈ ಕಾರ್ಯಾಚರಣೆಯ ವಿಡಿಯೋಗಳು ಈಗ ಲಭ್ಯವಾಗಿವೆ. ಆದರೆ, ಕಿಲೆಬಾಜ ಕಳ್ಳರು ಪೊಲೀಸರಿಗೆ ಯಾವುದೇ ಸುಳಿವು ಬಿಟ್ಟುಕೊಡದೆ ನಾಪತ್ತೆಯಾಗಿದ್ದಾರೆ. ಕಳವು ಮಾಡಿ ಯಮಲೂರಿನಿಂದ ಬಿಎಂಟಿಸಿ ಬಸ್ ಹತ್ತಿದ ಗ್ಯಾಂಗ್, ಮಾರತ್‌ಹಳ್ಳಿ ಬ್ರಿಡ್ಜ್ – ಟಿನ್ ಫ್ಯಾಕ್ಟರಿ – ರಿಂಗ್ ರೋಡ್ – ಹೆಬ್ಬಾಳ ಮಾರ್ಗವಾಗಿ ಯಶವಂತಪುರ ತಲುಪಿದೆ.
ಯಶವಂತಪುರದಿಂದ ಖಾಸಗಿ ಬಸ್ ಮೂಲಕ ನೇರವಾಗಿ ಮಹಾರಾಷ್ಟ್ರದ ಮುಂಬೈಗೆ ಪರಾರಿಯಾಗಿದ್ದಾರೆ
ಮುಂಬೈ ನಿಂದ ಲಕ್ಕೋಗೆ ರೈಲು ಅಥವಾ ಬಸ್ ಮೂಲಕ ತಲುಪಿದ್ದಾರೆ.
ಲಕ್ಕೋದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ‘ರುಪಾಡಿಯಾ’ ಎಂಬ ಗಡಿ ಪ್ರದೇಶಕ್ಕೆ ತೆರಳಿದ ಗ್ಯಾಂಗ್, ಅಲ್ಲಿನ ಅತೀ ಸೂಕ್ಷ್ಮ ಹಾಗೂ ಕಳ್ಳದಾರಿಗಳ ಮೂಲಕ ನೇಪಾಳಕ್ಕೆ ಪರಾರಿಯಾಗಿದೆ..
3 ಚೀಲದೊಂದಿಗೆ ನೇಪಾಳದ ‘ಗಂಜ್’ ಎಂಬ ಪ್ರದೇಶಕ್ಕೆ ತಲುಪಿದ ಆರೋಪಿಗಳು ಅಲ್ಲಿಂದ ಎಲ್ಲಿಗೆ ಹೋದರು ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.
ನೇಪಾಳದಲ್ಲಿ ಸ್ಥಳೀಯ ಪೊಲೀಸರ ಸಹಕಾರ ಪಡೆದರೂ, ಆರೋಪಿಗಳು ವಾಸಿಸುವ ಪ್ರದೇಶಗಳು ಅತ್ಯಂತ ದುರ್ಗಮವಾಗಿದ್ದವು. ಅಲ್ಲದೆ, ನೇಪಾಳಿ ಗ್ಯಾಂಗ್‌ಗಳು ಇಂತಹ ಕೃತ್ಯವೆಸಗಿ ತಮ್ಮ ಮೂಲ ಹಳ್ಳಿಗಳಿಗೆ ಸೇರಿದ ಮೇಲೆ ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂಬಂತಾಗಿದೆ. ಸದ್ಯಕ್ಕೆ 18 ಕೋಟಿ ಮೌಲ್ಯದ ಚಿನ್ನವನ್ನು ರಿಕವರಿ ಮಾಡುವ ಪೊಲೀಸರ ಕನಸು ಭಗ್ನಗೊಂಡಂತಿದ್ದು, ಬರಿಗೈಲಿ ವಾಪಸ್ಸಾದ ತಂಡ ಈಗ ಮುಂದಿನ ಕಾನೂನು ಹಾದಿಯ ಬಗ್ಗೆ ಚರ್ಚಿಸುತ್ತಿದೆ.

