ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಫೋಟಗೊಂಡ ಯುವಕನೋರ್ವ ಸುಟ್ಟು ಕರಕಲಾಗಿರುವ ಗುಂಡ್ಲುಪೇಟೆ ಘಟನೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮಳವಳ್ಳಿ ಗ್ರಾಮದ ಸ್ವಾಮಿ(28) ಮೃತ ದುರ್ದೈವಿ. ಬುಧವಾರ ರಾತ್ರಿ ಕುಡಿದು ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ಮೇಲ್ಛಾವಣಿಯ ಹೆಂಚು ಹಾರಿಹೋಗಿದ್ದು, ಮನೆಯಲ್ಲಿದ್ದ ವಿವಿಧ ವಸ್ತುಗಳು ಸಹ ಸುಟ್ಟು ಹೋಗಿದೆ. ಮೃತ ಯುವಕನು ಮದ್ಯದ ನಶೆಯಲ್ಲಿದ್ದಿದ್ದರಿಂದ ಅವಘಡದಿಂದ ಪಾರಾಗಲಾಗದೇ ಮಲಗಿದ್ದಲ್ಲೇ ಅಸುನೀಗಿದ್ದಾನೆ. ಈತ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು ಅಜ್ಜಿ ಮತ್ತು ಪಾಲಕರು ಬೇರೆ ಮನೆಯಲ್ಲಿ ಇರುತ್ತಿದ್ದರು ಎಂದು ಹೇಳಲಾಗುತ್ತಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗು ಸಿಲಿಂಡರ್ ಸ್ಫೋಟದಿಂದ ಯುವಕ ಸಾವನ್ನಪ್ಪಿದ್ಧಾನೆ. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಹಾಗು ಗ್ಯಾಸ್ ಕಂಪನಿಯವರು ಕೂಡಲೇ ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಆಯಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಳ್ಳವಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.