ಬೆಂಗಳೂರು, ಜೂ. 22- ಪ್ರಧಾನಿ ನರೇಂದ್ರಮೋದಿ ಅವರ ರಾಜ್ಯ ಭೇಟಿಯ ರಾಜ್ಯ ಬಿಜೆಪಿಯಲ್ಲಿ ವಿದ್ಯಮಾನಗಳು ಚುರುಕುಗೊಂಡಿವೆ. ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಪ್ರಧಾನಿ ಅವರ ಎರಡು ದಿನಗಳ ಭೇಟಿ ಬೆನ್ನಲ್ಲೇ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ನಾಳೆ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ. ಸರ್ಕಾರ ಹಾಗು ಪಕ್ಷದ ಮಟ್ಟದಲ್ಲಿ ಕೆಲ ಮಹತ್ತರ ಬದಲಾವಣೆಗಳಾಗುತ್ತವೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ರಾಜ್ಯಕ್ಕೆ ಕಳೆದ ಶವಿವಾರವಷ್ಟೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ನೀಡಿದ್ದರು. ಇದಾದ ನಂತರ ಪ್ರಧಾನಿ ಮೋದಿ ಅವರು ಸೋಮವಾರ ಮತ್ತು ಮಂಗಳವಾರ ಎರಡು ದಿನ ರಾಜ್ಯದಲ್ಲೇ ವಿವಿಧ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದರು. ಈ ಇಬ್ಬರೂ ನಾಯಕರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ರಾಜ್ಯ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದರು.
ಇದರ ಬೆನ್ನಲ್ಲೇ ವರಿಷ್ಠರು ಮುಖ್ಯಮಂತ್ರಿಗಳನ್ನು ದೆಹಲಿಗೆ ಬರುವಂತೆ ಸೂಚಿಸಿರುವುದು ಕುತೂಹಲಕ್ಕೆಡೆ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಮೂಲದ ಪ್ರಕಾರ ಮುಖ್ಯಮಂತ್ರಿಗಳ ನಾಳಿನ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸದ್ಯದಲ್ಲೇ ನಡೆಯಲಿರುವ ಬಿಬಿಎಂಪಿ, ಜಿಲ್ಲಾ ಪಂಚಾಯತಿ ಚುನಾವಣೆ ಸೇರಿದಂತೆ ಇತರೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿವೆ ಎಂದು ಹೇಳಿವೆ.
ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಇವರ ಭೇಟಿಯ ನಂತರವೇ ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಗುಟ್ಟು ರಟ್ಟಾಗಲಿದೆ.
ಸಿಎಂ ದೆಹಲಿ ಭೇಟಿ: ಕುತೂಹಲ ಮೂಡಿಸಿದ ವಿದ್ಯಮಾನ..
Previous Articleಪೋರ್ನ್ ವಿಡಿಯೋ ನೋಡಲು ಯುವತಿ ನೇಮಕ: ಗಂಟೆಗೆ ಒಂದೂವರೆ ಸಾವಿರ ರೂ. ಸಂಬಳ!
Next Article ಧೋನಿ ನಿರ್ಮಾಣದ ಚಿತ್ರದಲ್ಲಿ ದಳಪತಿ ವಿಜಯ್ ಹೀರೋ?!