ಬೆಂಗಳೂರು: ಶುಕ್ರವಾರ ರಾತ್ರಿಯಿಂದೀಚೆಗೆ ರಾಜ್ಯದ ಹಲವೆಡೆ ಜನರಿಗೆ ಲಘು ಭೂಕಂಪನದ ಅನುಭವವಾಗಿದೆ.
ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಯ ಹಲವೆಡೆ ಭೂಕಂಪನವಾಗಿದೆ.
ಹಾಸನ, ಮಂಡ್ಯ, ಮೈಸೂರು ಹಾಗೂ ಕೊಡಗು ಜಿಲ್ಲೆಯ ಕೆಲವೆಡೆ ಶನಿವಾರ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಕಂಪನ ದಾಖಲಾಗಿದೆ.
ಭೂಕಂಪನದ ಕೇಂದ್ರಬಿಂದು ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಾಲುಗಾನಹಳ್ಳಿ ಸಮೀಪವಿತ್ತು ಎಂದು ತಿಳಿದುಬಂದಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಭಾರೀ ಮಳೆಯ ನಡುವೆಯೇ ಭೂಕಂಪ ಸಂಭವಿಸಿದೆ. ಜಿಲ್ಲೆಯ ಸುಳ್ಯ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಎಂಬಲ್ಲಿ ಶನಿವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಆತಂಕಕ್ಕೀಡಾದ ಜನರು ಮನೆಯಿಂದ ಹೊರಗೋಡಿಬಂದಿದ್ದಾರೆ. ಶನಿವಾರ ಬೆಳಗ್ಗೆ 9:12ರ ಸುಮಾರಿಗೆ ಭೂಮಿ ಕಂಪಿಸಿದ್ದು, 3-4 ಸೆಕೆಂಡುಗಳ ಕಾಲ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ
ವಿಜಯಪುರ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿ 10.46ರ ವೇಳೆಗೆ ಲಘು ಭೂಕಂಪನವಾಗಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ನಗರದ ರೈಲ್ವೆ ನಿಲ್ದಾಣ, ಗೋಳಗುಮ್ಮಟ, ಕೀರ್ತಿನಗರ ಸೇರಿದಂತೆ ವಿವಿಧೆಡೆ ಹಾಗೂ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.