ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ದಲಿತ ಮುಖ್ಯಮಂತ್ರಿ ವಿಷಯ ಮುನ್ನೆಲೆಗೆ ಬಂದಿದೆ. ಈ ವಿಷಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಆರಂಭಗೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯಕ್ಕೆ ಸೇರಿದವರನ್ನು ಸಿಎಂ ಮಾಡುತ್ತೇವೆಂದು ಘೋಷಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸವಾಲು ಹಾಕಿದೆ.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮತ್ತೊಮ್ಮೆ ‘ದಲಿತ ಸಿಎಂ’ ಚರ್ಚೆಯನ್ನು ಮುನ್ನಲೆಗೆ ತಂದಿದೆ. ‘ಕೆಪಿಸಿಸಿ ಅಧ್ಯಕ್ಷರು ದಲಿತರನ್ನು ಸಿಎಂ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಿದ್ದರಾಮಯ್ಯ’ಅವರೇ ಎಂದು ಪ್ರಶ್ನಿಸಿರುವ ಬಿಜೆಪಿ, ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕಿದೆಯೇ? ಎಂದು ಪ್ರಶ್ನಿಸಿದೆ.
ಡಿಕೆಶಿ ಅವರೇ, ನಿಮಗೆ ನಿಜಕ್ಕೂ ದಲಿತರ ಮೇಲೆ ಕಾಳಜಿಯಿದ್ದರೆ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಿಸಿ. ಆಷಾಢಭೂತಿತನದ ಪ್ರದರ್ಶನವೇಕೆ? ಎಂದು ಸವಾಲು ಹಾಕಿದೆ.
ನಿಮ್ಮದೇನಿದ್ದರೂ ಅಧಿಕಾರದ ಪಾಯಸ ಉಣ್ಣಲು ಹೋರಾಟವಷ್ಟೇ ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಅಕಾಲದಲ್ಲಿ ವಾದ ಮಾಡುವ ಕಾಂಗ್ರೆಸ್ ನಾಯಕರಿಗೆ ಅಧಿಕಾರದಲ್ಲಿ ಇದ್ದಾಗ ದಲಿತರ ಮೇಲಿನ ಕಾಳಜಿ ಮರೆತು ಹೋಗುತ್ತದೆ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ, ಡಿಕೆಶಿಯೂ ಅಪವಾದವಲ್ಲ. ಅಧಿಕಾರಕ್ಕಾಗಿ ಓಲೈಕೆ ರಾಗವಷ್ಟೇ! ಎಂದು ವ್ಯಂಗ್ಯವಾಡಿದೆ.
ಈ ಹಿಂದೆ ದಲಿತ ಮುಖ್ಯಮಂತ್ರಿ ವಾದ ತೀವ್ರಗೊಂಡಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಸೌಜನ್ಯಕ್ಕೂ ಬಾಯಿ ತೆರೆಯಲಿಲ್ಲ. ಸಂಪುಟದಿಂದ ಸಿದ್ದರಾಮಯ್ಯ ನಿಮ್ಮನ್ನು ಕಿತ್ತೊಗೆಯುತ್ತಿದ್ದರು ಎಂಬ ಭಯ ಕಾಡುತ್ತಿತ್ತೇ ಡಿಕೆಶಿ? ಎಂದು ಪ್ರಶ್ನಿಸಿದೆ.
ಇನ್ನು, ‘ಮೂಲ ಕಾಂಗ್ರೆಸ್ಸಿಗರೇ ಎತ್ತಿದ್ದ ಈ ವಾದಕ್ಕೆ ಡಿಕೆಶಿ ಬೆಂಬಲ ನೀಡದೇ ಇದ್ದಿದ್ದೇಕೆ? ಹೌದು, ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಆದರೆ ಈ ನೀವು ಈ ಪ್ರಶ್ನೆ ಕೇಳಲು ಅರ್ಹರಲ್ಲ, ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರದಲ್ಲಿ ಸರ್ವಾಂಗವನ್ನೂ ಸ್ತಬ್ಧಗೊಳಿಸಿಕೊಂಡಿದ್ದಿರಲ್ಲವೇ?’ ಎಂದು ಹೇಳಿದೆ.
Previous ArticleDrink and Drive ವಾಹನ ಸವಾರರಿಗೆ ಮಾತ್ರ ದಂಡ!
Next Article ಅಮಲಿನಲ್ಲಿ ಚುಚ್ಚಿ ಕೊಂದ ಭೂಪ