ಬೆಳಗಾವಿ,ಡಿ.16-ನಗರದಲ್ಲಿ ನಡೆಯುವ ಅಧಿವೇಶನಕ್ಕೆ ಬರುತ್ತಿದ್ದ ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ತಪ್ಪು ಮರೆಮಾಚಲು ಚಾಲಕ ಸುಳ್ಳು ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿ ಅಧಿವೇಶನದ ಕರ್ತವ್ಯಕ್ಕೆ ಬರುತ್ತಿದ್ದ ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್‌ಗೆ ಸೇರಿದ ಬೊಲೆರೊ ವಾಹನದ ಮುಂಭಾಗದ ಗಾಜು ಜಖಂಗೊಂಡಿತ್ತು.
ಸುವರ್ಣಸೌಧ ಬಳಿ ನಿನ್ನೆ ರಾತ್ರಿ 10:30ರ ಸುಮಾರಿಗೆ ಮರಾಠಿ ಮಾತನಾಡುತ್ತಿದ್ದ ಯುವಕರು ಕಲ್ಲು ತೂರಾಟ ನಡೆಸಿದ್ದಾರೆಂದು ಚಾಲಕ ಚೇತನ್ ಎನ್.ವಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಧಿವೇಶನ ಹಿನ್ನೆಲೆಯಲ್ಲಿ ಭದ್ರತೆ ಚುರುಕುಗೊಳಿಸಿದ್ದ ಪೊಲೀಸರು ಈ ಪ್ರಕರಣದ ತನಿಖೆಗೆ ಇಳಿದಿದ್ದಾರೆ. ತನಿಖೆಯ ವೇಳೆ ಹಿರೇಬಾಗೇವಾಡಿ ಟೋಲ್‌ಗೇಟ್ ಸಿಸಿ ಕ್ಯಾಮೆರಾ ಚಾಲಕ ಹೇಳಿದ್ದ ಸುಳ್ಳನ್ನು ಬಯಲು ಮಾಡಿದೆ.
ಬೆಂಗಳೂರಿಂದ ಬೆಳಗಾವಿಗೆ ನಿನ್ನೆ ಬೆಳಗ್ಗೆ 7.45ಕ್ಕೆ ಪ್ರಯಾಣ ಬೆಳೆಸಿದ್ದ ಚಾಲಕ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದ ಬಳಿ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿದ್ದಾನೆ. ನಂತರ ಧಾರವಾಡ – ಹಿರೇಬಾಗೇವಾಡಿ ಟೋಲ್ ನಾಕಾ ಮಧ್ಯೆ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಬೊಲೆರೊ ವಾಹನದ ಗಾಜು ಜಖಂಗೊಂಡಿತ್ತು. ಬೆಳಗಾವಿಗೆ ಬರುತ್ತಿದ್ದಾಗ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಮುಂಭಾಗದ ಗಾಜು ಜಖಂಗೊಂಡ ಬೊಲೆರೊ ವಾಹನ ಸಂಚರಿಸುವ ದೃಶ್ಯ ಸೆರೆಯಾಗಿದೆ. ನಂತರ ತನ್ನ ತಪ್ಪು ಗೊತ್ತಾದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂಬ ಭಯದಿಂದ ಚಾಲಕ ಸುಳ್ಳು ದೂರು ನೀಡಿದ್ದ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿ, ಸುಳ್ಳು ಸುದ್ದಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸುಳ್ಳು ದೂರು ನೀಡಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Accident ಮರೆಮಾಚಲು ಕಲ್ಲುತೂರಾಟದ ಕಥೆ ಕಟ್ಟಿದ ಚಾಲಕ
Previous Articleಶಾರುಕ್ ಖಾನ್ ಸಿನಿಮಾ ಪಠಾಣ್ Ban?
Next Article Nagamangala ದಲ್ಲಿ ವಿಜಯಮಾಲೆ ಯಾರ ಕೊರಳಿಗೆ..?