ಬೆಂಗಳೂರು, ನ.13 -ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಮೊದಲ ದಿನವಾದ ನಿನ್ನೆ ಒಂದೇ ದಿನ ನಗರದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾದ 29 ಪ್ರಕರಣಗಳು ದಾಖಲಾಗಿದ್ದರೆ 20 ಕ್ಕೂ ಮಂದಿಯ ಮೈಕೈಗೆ ಸುಟ್ಟಗಾಯಗಳಾಗಿವೆ
ನಗರದಲ್ಲಿ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ 29ಕ್ಕೂ ಹೆಚ್ಚು ಪಟಾಕಿ ಸಿಡಿತದಿಂದ ಗಾಯ ಪ್ರಕರಣಗಳು ದಾಖಲಾಗಿದ್ದು, ನಾರಾಯಣ ನೇತ್ರಾಲಯದಲ್ಲಿ 22 ಮಂದಿ ಹಾಗೂ ಮಿಂಟೋ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆಗಾಗಿ ಧಾವಿಸಿದ್ದಾರೆ.
ಮೈಕೈಗೆ ಸುಟ್ಟಗಾಯಗೊಂಡವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಗಂಭೀರವಾದ ಗಾಯಗೊಂಡವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ನಾರಾಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 10 ಮಂದಿಯ ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ. 12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. 4 ಮಕ್ಕಳು ಹಾಗೂ ಉಳಿದ ವಯಸ್ಕರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 7 ಪ್ರಕರಣ ದಾಖಲಾಗಿದ್ದು, ಇಬ್ಬರಿಗೆ ಗಂಭೀರವಾಗಿ ಉಳಿದ ಐವರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂಥ ಅವಘಡಗಳಾಗುತ್ತಿವೆ. ಪಟಾಕಿಯ ಮೇಲೆ ಬಾಗಿ ಹಚ್ಚುವುದು ಅಥವಾ ಮೈಗೆ ಸಮೀಪದಲ್ಲಿ ಹಿಡಿದು ಹಚ್ಚುವುದು, ನೈಲಾನ್ ಬಟ್ಟೆಗಳನ್ನ ಧರಿಸಿಕೊಂಡಿರುವುದು ಇತ್ಯಾದಿಗಳಿಂದ ಕಣ್ಣಿಗೆ ಗಾಯ ಮೈಕೈಗೆ ಸುಟ್ಟ ಗಾಯಗಳಾಗಿವೆ.
ದೀಪಾವಳಿ ಹಬ್ಬದ ವೇಳೆ ಕೇವಲ ಹಸಿರು ಪಟಾಕಿ ಸಿಡಿಸಬೇಕು ಎಂಬ ಸೂಚನೆಯ ನಡುವೆ ನಿನ್ನೆ ನಗರದೆಲ್ಲೆಡೆ ನಿಯಮಗಳನ್ನು ಮೀರಿ ಎಲ್ಲ ಮಾದರಿಯ ಪಟಾಕಿಯನ್ನು ಜನತೆ ಸಿಡಿಸಿದ್ದಾರೆ.
ಇಂದು ಮತ್ತು ನಾಳೆ ದೀಪಾವಳಿ ಅಮಾವಾಸ್ಯೆ ಮತ್ತು ಬಲಿಪಾಡ್ಯಮಿಯಂದು ಪಟಾಕಿ ಸಿಡಿಲಾಗುತ್ತಿದ್ದು, ಬಿಬಿಎಂಪಿ ಅನುಮತಿ ನೀಡಿರುವ ಮೈದಾನಗಳಲ್ಲಿ ತೆರೆದಿರುವ ಮಳಿಗೆಗಳಲ್ಲಿ ಜನ ಪಟಾಕಿ ಖರೀದಿಸಿದರು.
ಪ್ರತಿದಿನ ರಾತ್ರಿ 8ರಿಂದ 10ರವರೆಗಿನ 2 ತಾಸು ಅವಧಿಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಆದರೆ, ನಿನ್ನೆ ನಸುಕಿನಲ್ಲೇ ಆರಂಭವಾದ ಪಟಾಕಿ ಅಬ್ಬರ, ತಡರಾತ್ರಿವರೆಗೂ ಮುಂದುವರೆದಿತ್ತು.
ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಜನರು ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಕುರಿತು ವಿಚಾರಿಸಿದ್ದಾರೆ. ಆದರೆ, ಸರ್ಕಾರದ ಸೂಚನೆಯಂತೆ ಎನ್‌ಇಇಆರ್‌ಐ ಲೋಗೋ ಮತ್ತು ಕ್ಯೂ ಆರ್ ಕೋಡ್ ಇರುವ ನೈಜ ಹಸಿರು ಪಟಾಕಿ ಮಾರುಕಟ್ಟೆಯಲ್ಲಿ ಕಾಣಿಸಿಲ್ಲ. ಹೀಗಾಗಿ ದೊರೆತ ಪಟಾಕಿಗಳೆಲ್ಲವನ್ನು ಸಿಡಿಸಿದ್ದಾರೆ.