ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ವೇಳೆ ಶಿಕ್ಷಕರು ಯಡವಟ್ಟು ಮಾಡಿರುವ ಕುರಿತು ಇತ್ತೀಚೆಗೆ ದೂರುಗಳು ಮಾಮೂಲಿಯಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ ಬೀಳುತ್ತಿದೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಈ ಬಾರಿ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.
ಮುಂದಿನ ವಾರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿ ಶಿಕ್ಷಕರು ಮೌಲ್ಯಮಾಪನದಲ್ಲಿ ಲೋಪ ಮಾಡಿದರೆ ಅಂತಹ ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ.
ಶಿಕ್ಷಕರು ಮಾಡುವ ಲೋಪದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತಿತ್ತು. ಇದನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಮಾಡಿದೆ. ಈ ವರ್ಷದ ಮೌಲ್ಯಮಾಪನದಲ್ಲಿ ಲೋಪ ಮಾಡುವ ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಜೊತೆಗೆ ಮುಂದಿನ ವರ್ಷದ ಮೌಲ್ಯಮಾಪನ ಕೆಲಸದಿಂದಲೂ ಇಂತಹ ಶಿಕ್ಷಕರನ್ನ ಕೈ ಬಿಡಲು ಇಲಾಖೆ ನಿರ್ಧಾರ ಮಾಡಿದೆ.
ಈ ವರ್ಷದ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 21ರಿಂದ ಪ್ರಾರಂಭ ಆಗಲಿದೆ. ಮೌಲ್ಯಮಾಪನಕ್ಕೆ 60 ಸಾವಿರ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಒಬ್ಬ ವಿದ್ಯಾರ್ಥಿಗೂ ಅನ್ಯಾಯ ಆಗಬಾರದೆಂದು ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಕಪ್ಪು ಪಟ್ಟಿಯ ಜೊತೆಗೆ ದಂಡದ ಪ್ರಮಾಣವನ್ನು ಇಲಾಖೆ ಹೆಚ್ಚಳ ಮಾಡಿದೆ. ಮೌಲ್ಯಮಾಪನ ಲೋಪ ಮಾಡುವ ಶಿಕ್ಷಕರಿಗೆ 2 ಸಾವಿರ ರೂ.ವರೆಗೂ ದಂಡ ವಿಧಿಸಲು ನಿರ್ಧರಿಸಿದೆ.