ಬೆಂಗಳೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಕೆಲವು ಸಂಸದ ಮತ್ತು ಶಾಸಕರು ಬೆಂಗಳೂರಿನಲ್ಲಿ ಕೋಮುದ್ವೇಷ ಸೃಷ್ಟಿಸಿ , ಗಲಭೆ ಎಬ್ಬಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಜಾಗ್ರತ ನಾಗರಿಕರು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ನಗರ್ತಪೇಟೆ ಪ್ರದೇಶದಲ್ಲಿ ನಡೆಯಿತೆನ್ನಲಾದ ಒಂದು ಘಟನೆಯನ್ನಾಧರಿಸಿ ಬಿಜೆಪಿಯ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಕೆಲವು ಕಾರ್ಯಕರ್ತರು ಕೋಮು ದ್ವೇಷ ಹರಡಲು ಸಂಚು ರೂಪಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಈ ನಾಯಕರು ಬೆಂಗಳೂರಿನ ನಗರ್ತಪೇಟೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದ್ದಾರೆ
ನಗರ್ತ ಪೇಟೆ ಪ್ರಕರಣ ವಿಚಾರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ಯಾವುದೇ ಧಾರ್ಮಿಕ ಘಟನೆಗೆ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತು ಉಲ್ಲೇಖವಿಲ್ಲ. ಅಲ್ಲದೇ ಅಂತಹ ಯಾವ ಘಟನೆಗಳು ನಡೆದಿಲ್ಲ ಎಂಬ ಪೋಲೀಸರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲಿ ಯಾವುದೇ ಇಂತಹ ಘಟನೆ ನಡೆದಿದ್ದರೂ ಅದರ ಗಹನತೆಯನ್ನಾಧರಿಸಿ ಪೋಲೀಸರು ಕ್ರಮ ಕೈಗೊಳ್ಳುವುದು ನೆಲದ ಕಾನೂನಿನ ಪ್ರಕಾರ ನಡೆಯಬೇಕು. ಆದರೆ ನಡೆದ ಘಟನೆಗೆ ಕೋಮುವಾದದ ಬಣ್ಣ ಬಳಿದು ಅದನ್ನು ಕೋಮುದ್ವೇಷ ಹರಡಲು ಪಿತೂರಿ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಡೀ ದೇಶದಲ್ಲೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿದ್ದವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆದರೆ ಇಲ್ಲಿ ದೇಶದ ಸಂವಿಧಾನವನ್ನು ಗೌರವಿಸಿ ಕಾಪಾಡುವ ಕೆಲಸದಲ್ಲಿ ತೊಡಗುವ ಬದಲು ಕೋಮುದ್ವೇಷವನ್ನು ಹೆಚ್ಚಿಸುವ ರೀತಿ ಪ್ರಚೋದನಕಾರಿಯಾಗಿ ಮಾತನಾಡುತ್ತಿರುವುದು, ಜನರನ್ನು ದೊಂಬಿ ಗಲಭೆಗಳಿಗೆ ಪ್ರಚೋದಿಸುತ್ತಿರುವುದು, ಧರ್ಮದ್ವೇಷಕ್ಕೆ ಪುಷ್ಟಿಕೊಡುತ್ತಿರುವುದು ಭಾರತೀಯ ದಂಡಸಂಹಿತೆಯ ಪ್ರಕಾರ ಕೂಡ ಶಿಕ್ಷಾರ್ಹ ಅಪರಾಧವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.