ಆಗಸದಲ್ಲಿ ಹಾರುತ್ತಿದ್ದ ಬೋಯಿಂಗ್ ವಿಮಾನ (Alaska Airlines) ಒಂದರಲ್ಲಿ ಅಚಾನಕ್ಕಾಗಿ ಕಿಟಕಿಯೊಂದು ಕಳಚಿಕೊಂಡು ಹಾರಿ ಹೋದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕಿಟಕಿಯೊಂದಿಗೆ ವಿಮಾನದ ಒಂದಷ್ಟು ಭಾಗವೂ ಕಳಚಿಕೊಂಡಿದ್ದು ವರದಿಯಾಗಿದೆ. ಅಮೆರಿಕಾದ ಪೋರ್ಟ್ ಲ್ಯಾನ್ಡ್ ನಲ್ಲಿ ಇಂದು ಈ ಘಟನೆ ಸಂಭವಿಸಿದೆ. ಹಾರಾಟ ಆರಂಭಿಸಿದ ಐದಾರು ನಿಮಿಷಗಳಲ್ಲಿ ವಿಮಾನ ಹದಿನಾರು ಸಾವಿರ ಅಡಿಗಳಷ್ಟು ಮೇಲೆಕ್ಕೆ ಏರಿದ್ದಾಗ ಈ ಘಟನೆ ಸಂಭವಿಸಿ ವಿಮಾನದ ಪ್ರಯಾಣಿಕರಲ್ಲಿ ಭಯ ಮೂಡಿಸಿದೆ. ಆದರೆ ಈ ಘಟನೆಯಲ್ಲಿ ಸಾವು ನೋವಾಗಿರುವ ಬಗ್ಗೆ ವರದಿಯಾಗಿಲ್ಲ.
ಈ ವಿಮಾನ ಅಲಾಸ್ಕಾ ಏರ್ಲೈನ್ಸ್ ಸಂಸ್ಥೆಗೆ ಸೇರಿದ್ದು ಈಗ ಆ ಸಂಸ್ಥೆ ಎಲ್ಲಾ ಬೋಯಿಂಗ್ ವಿಮಾನಗಳನ್ನು ಸುರಕ್ಷತೆಯ ದೃಷ್ಟಿಯಿಂದ ಹಾರಿಸದಿರಲು ನಿರ್ಧರಿಸಿದೆ. ಈಗಾಗಲೇ ಅನೇಕ ಸಂದರ್ಭಗಳಲ್ಲಿ ಬೋಯಿಂಗ್ ವಿಮಾನಗಳಲ್ಲಿ ಅನೇಕ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೋಯಿಂಗ್ ವಿಮಾನಗಳ ಬಗ್ಗೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎನ್ನಲಾಗಿದೆ.