ಭೋಪಾಲ್
ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊಂಡರು ಎಂಬ ಗಾದೆ ಮಾತಿನಂಥ ಸುದ್ದಿ ಇದು.
ಮಧ್ಯಪ್ರದೇಶ ಸರ್ಕಾರ ಭೋಪಾಲ್ ನ ತೌರಾದಲ್ಲಿ (Bhopal, Madhya Pradesh) ಹೊಸದಾಗಿ ಕ್ರೀಡಾಂಗಣ ನಿರ್ಮಾಣ ಮಾಡಿದೆ. ಎಲ್ಲಾ ರೀತಿಯ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಾಣಗೊಂಡಿದೆ.
ಈ ರೀತಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಮೈದಾನದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯಕ್ಕೆ ಕೇಂದ್ರ ಮಂತ್ರಿ ಜ್ಯೊತಿರಾಧಿತ್ಯ ಸಿಂಧಿಯಾ (Jyotiraditya M Scindia) ಚಾಲನೆ ನೀಡಿದರು. ಈ ವೇಳೆ ಅವಘಡವೊಂದು ನಡೆಯಿತು.
ಸೌಹಾರ್ದ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಹೊಡೆದ ಚೆಂಡು BJP ಕಾರ್ಯಕರ್ತರೊಬ್ಬರ ತಲೆಗೆ ತಗುಲಿ ಗಾಯಗೊಂಡಿದ್ದಾರೆ.
ಸಿಂಧಿಯಾ ಅವರು ಬಾರಿಸಿದ ಚೆಂಡನ್ನು ವಿಕಾಸ್ ಮಿಶ್ರಾ ಎಂಬವರು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕ್ಯಾಚ್ ಕೈ ತಪ್ಪಿ ಚೆಂಡು ಹಣೆಗೆ ಬಡಿದಿದೆ. ಹಣೆಗೆ ಗಾಯವಾಗಿ ರಕ್ತ ಸೋರಲು ಆರಂಭಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಘಟನೆ ನಡೆದ ಕೂಡಲೇ ಪಂದ್ಯ ರದ್ದು ಮಾಡಲಾಗಿದ್ದು, ಗಾಯಾಳು ವಿಕಾಸ್ ಅವರನ್ನು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜಿಗೆ (Sanjay Gandhi Medical College) ಕರೆದೊಯ್ಯಲಾಗಿದೆ. ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ BJP ನಾಯಕರು ಗಾಯಾಳುವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.