ಬೆಂಗಳೂರು,ಏ.6: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಕಾರ್ಯ ಯೋಜನೆ ಮಾಡುತ್ತಿರುವ ಬಿಜೆಪಿಗೆ ಭಿನ್ನಮತ ಬಗೆಹರಿಯದಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾರವಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ನಾಯಕತ್ವದ ವಿರುದ್ಧ ಸಮರ ಸಾರಿರುವ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ (Anantkumar Hegde) ಮತ್ತು ಶಾಸಕ ಶಿವರಾಂ ಹೆಬ್ಬಾರ್ ಪಕ್ಷದ ಕೋರ್ ಕಮಿಟಿ ಸಭೆಗೆ ಹಾಜರಾಗದೆ ದೂರ ಉಳಿಯುವ ಮೂಲಕ ಈ ಚುನಾವಣೆಯಲ್ಲಿ ತಾವು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ಸೂಚನೆಯ ಮೇರೆಗೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಕಾರವಾರ ಲೋಕಸಭಾ ಕ್ಷೇತ್ರದ ಕೋರ್ ಕಮಿಟಿ ಸದಸ್ಯರ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದರು ಈ ಸಭೆಗೆ ಕಾರವಾರ ಕ್ಷೇತ್ರ ಉಸ್ತುವಾರಿ ಹರತಾಳ ಹಾಲಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲ ಮುಖಂಡರು ಹಾಜರಾಗಿದ್ದರು.
ಆದರೆ ಬೆಂಗಳೂರಿನಲ್ಲೇ ಇದ್ದರೂ ಅನಂತಕುಮಾರ ಹೆಗಡೆ ಮತ್ತು ಶಿವರಾಮ ಹೆಬ್ಬಾರ್ ಸಭೆಗೆ ಹಾಜರಾಗಲಿಲ್ಲ ಅಷ್ಟೇ ಅಲ್ಲ ಬೆಂಗಳೂರಿಗೆ ಬಂದಿದ್ದ ಶಿವರಾಮ್ ಹೆಬ್ಬಾರ್ ಅವರೊಂದಿಗೆ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯಿತಿ ಸದಸ್ಯರು ಪುರಸಭೆಯ ಸದಸ್ಯರು ನಿವಾಸದಲ್ಲಿ ಸಭೆ ನಡೆಸಿದರು.
ಈ ಚುನಾವಣೆಯಲ್ಲಿ ತಾವು ತಟಸ್ಥರಾಗಿರುವುದಾಗಿ ಹೆಬ್ಬಾರ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದು ಚುನಾವಣೆಯ ನಂತರ ರಾಜಕೀಯವಾಗಿ ಮಹತ್ವದ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಮತ್ತೊಂದೆಡೆ ಸಭೆಗೆ ಬರುವಂತೆ ಆಹ್ವಾನ ನೀಡಿದ ನಾಯಕರಿಗೆ ತಮ್ಮ ನಿಲುವು ತಿಳಿಸಿರುವ ಸಂಸದ ಅನಂತಕುಮಾರ ಹೆಗಡೆ ಈ ಚುನಾವಣೆಯಲ್ಲಿ ತಾವು ಕಾರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಿಲ್ಲ ಚುನಾವಣಾ ಪ್ರಚಾರದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದು ತಮ್ಮ ಬೆಂಬಲಿಗರು ರಾಜಕೀಯವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಎಂದು ಹೇಳಿದ್ದಾರೆ. ಈ ನಾಯಕರು ತಳೆದಿರುವ ಬಿಗಿ ನಿಲುವು ಕಾರವಾರ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅವರಿಗೆ ದೊಡ್ಡ ತಲೆನೋವು ತಂದುಕೊಟ್ಟಿದೆ.
ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು:
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕರ್ನಾಟಕದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಪರವಾದ ಅಲೆ ಎದ್ದು ಕಾಣುತ್ತಿದೆ ಹೀಗಾಗಿ ಮೂವರು ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದಕು ಮುನ್ನ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ವಿರೋಧಿಗಳು ನಮ್ಮನ್ನು ಅಲ್ಪಸಂಖ್ಯಾತರ ವಿರೋಧಿಗಳು ಎಂಬಂತೆ ಬ್ರಾಂಡ್ ಮಾಡುತ್ತಿದ್ದು ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆ ನೀಡಿರುವ ಯೋಜನೆಗಳನ್ನು ಮನದಟ್ಟು ಮಾಡುವ ಮೂಲಕ ಬಿಜೆಪಿ ಎಲ್ಲರ ಪಕ್ಷವಾಗಿದೆ ಎಂದು ಮನವರಿಕೆ ಮಾಡಿಕೊಡುವಂತೆ ಕರೆ ನೀಡಿದರು.
ಪಕ್ಷದ ಕಾರ್ಯಕರ್ತರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಎಂದು ಹೇಳಿದರು.