ಬೆಂಗಳೂರು, ಸೆ.1- ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಬಂಧನದ ಭೀತಿಯಲ್ಲಿರುವ ಮುರುಘಾ ಮಠದ ಶರಣರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಒಬ್ಬಾಕೆ ದಲಿತ ಸಮುದಾಯಕ್ಕೆ ಸೇರಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದ
ಮುರುಘಾ ಶ್ರೀಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಪ್ರಕರಣ ದಾಖಲಿಸಿರುವುದರಿಂದ
ಮತ್ತೊಂದು ಸಂಕಷ್ಟ ಎದುರಾಗಿದೆ.
ಶರಣರು ಇವೆಲ್ಲವುಗಳಿಂದ ಹೊರಬರಲು ಸಾಧ್ಯವೇ ಎನ್ನುವ ಪ್ರಶ್ನೆ ಮಠದ ಅಸಂಖ್ಯಾತ ಭಕ್ತರು ಅಭಿಮಾನಗಳಲ್ಲಿ ಎದುರಾಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿ ಚಿತ್ರದುರ್ಗದ ಎಸ್‍ಪಿಗೆ ನೋಟಿಸ್ ನೀಡಿದ್ದು ಮುಂದಿನ 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಪ್ರಕರಣ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ವರದಿಯನ್ನು ಆಯೋಗ ಕೇಳಿದ್ದು ಎಸ್ ಪಿ ವರದಿ ಸಲ್ಲಿಸುವ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಕ್ಷನ್ 41ಎ ಅಡಿ ನೋಟಿಸ್:
ಪ್ರಕರಣದ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿನಿಯರ ಸಿಆರ್‌ಪಿಸಿ 164 ಹೇಳಿಕೆಯು ತನಿಖಾಧಿಕಾರಿಗಳ ಕೈ ಸೇರಲಿದ್ದು,ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಆರೋಪಿ ಬಂಧನ ಅಗತ್ಯವಿಲ್ಲದ ಸಂದರ್ಭದಲ್ಲಿ ಪೊಲೀಸರ ಮುಂದೆ ಹಾಜರಾಗಲು ಈ ನೋಟಿಸ್ ಅನ್ನು ಜಾರಿ ಮಾಡಲಾಗುತ್ತದೆ. ತನಿಖಾಧಿಕಾರಿಗಳು ಪರಿಶೀಲಿಸಿ ಬಳಿಕ ಶ್ರೀಗಳಿಗೆ ನೋಟಿಸ್ ನೀಡಬಹುದಾಗಿದೆ.
ಅತ್ಯಾಚಾರ ಯತ್ನ ಕೇಸ್:
ಈ ಮಧ್ಯೆ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ಅಕ್ಕಮಹಾದೇವಿ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಶ್ಮಿ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಮಹಜರು ಮಾಡಲಾಗಿದೆ. ಆದರೆ ಆರೋಪಿ ಬಸವರಾಜನ್ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ.
ಆಗಸ್ಟ್ 28ರಂದು ಪ್ರಕರಣದ ವಿಚಾರಣೆ ವೇಳೆ ಬಾಲಕಿಯ ಹೇಳಿಕೆ ಮೇರೆಗೆ ಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಈ ನಡುವೆ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ವಿರುದ್ಧ ಚಿತ್ರದುರ್ಗ ಬಾಲಕಿಯರ ಬಾಲಮಂದಿರ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ.
ಭದ್ರತೆ ಹೆಚ್ಚಳ:
ಪ್ರಕರಣದ ಬೆನ್ನಲ್ಲೇ ಮುರುಘಾ ಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದ್ದು ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.