ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಲೋಕಾಯುಕ್ತರನ್ನು ನೇಮಕ ಮಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಹಾಲಿ ಉಪ ಲೋಕಾಯುಕ್ತ ಭೀಮನಗೌಡ ಸಂಗನಗೌಡ ಪಾಟೀಲ್ (ಬಿ.ಎಸ್.ಪಾಟೀಲ್) ಅವರು ನೂತನ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ.
ಬಿಎಸ್ ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಶಿಫಾರಸಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮಂಗಳವಾರ ಅಂಕಿತ ಹಾಕಿದ್ದಾರೆ.
ಬಿಎಸ್ ಪಾಟೀಲ್ ಅವರು ಬುಧವಾರ(ಜೂ.15) ಬೆಳಗ್ಗೆ ರಾಜಭವನದಲ್ಲಿ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು 2022ರ ಜನವರಿ 27ರಂದು ನಿವೃತ್ತರಾಗಿದ್ದರು. ಅಂದಿನಿಂದ ಈ ಹುದ್ದೆ ಖಾಲಿ ಇತ್ತು.