ಬೆಂಗಳೂರು, ಜೂ6- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಇದಕ್ಕೂ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿದೆ.
ಇದಕ್ಕಾಗಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಬಿಬಿಎಂಪಿ ಚುನಾವಣೆಗೆ ಪಕ್ಷ ರೂಪಿಸುವ ಈ ಬದಲಾವಣೆಯ ಕಾರ್ಯತಂತ್ರ ವಿಧಾನಸಭೆ ಚುನಾವಣೆಗೂ ಅಳವಡಿಕೆಯಾಗುವ ಸಾಧ್ಯತೆಯಿದೆ.ಆದರೆ, ಇದು ಬಿಬಿಎಂಪಿ ಚುನಾವಣೆಯ ಫಲಿತಾಂಶವನ್ನು ಅವಲಂಬಿಸಿರಲಿದೆ.
ಈಗಾಗಲೇ ಗುಜರಾತ್ ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮಹಾನಗರ ಪಾಲಿಕೆಯಲ್ಲಿ ಈ ತಂತ್ರ ರೂಪಿಸಿ ಯಶಸ್ಸು ಗಳಿಸಲಾಗಿದೆ ಇದನ್ನೇ ಮಾನದಂಡವಾಗಿ ಬೆಂಗಳೂರು ಪಾಲಿಕೆಯಲ್ಲೂ ಪ್ರಯೋಗಿಸಲು ಚಿಂತನೆ ನಡೆಸಲಾಗಿದೆ.
ಪಾಲಿಕೆ ಚುನಾವಣೆ ಸಂಬಂಧ ಇತ್ತೀಚೆಗೆ ನಡೆದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಸಭೆಗೆ ಕಾರ್ಯತಂತ್ರವನ್ನು ವಿವರಿಸಿ ಇದರ ಆಧಾರದಮೇಲೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಸಲಹೆ ಮಾಡಿದ್ದಾರೆ.
ಇವರು ನೀಡಿರುವ ಪಕ್ಷದ ಕಾರ್ಯತಂತ್ರದ ಪ್ರಕಾರ ಈಗಾಗಲೇ ಮೇಯರ್, ಉಪಮೇಯರ್,ಹುದ್ದೆ ಅಲಂಕರಿಸಿದವರು,ಸತತ ಮೂರು ಬಾರಿ ಗೆದ್ದವರು, ಸ್ಥಾಯಿ ಸಮಿತಿ ಅಧ್ಯಕ್ಷರಾದವರು ಹಾಗೂ ಪದೇ ಪದೇ ಅಕಾರ ಅನುಭವಿಸಿದವರಿಗೆ ಗೇಟ್ ಪಾಸ್ ನೀಡಲಾಗುವುದು. ಇಂತಹವರಿಗೆ ಯಾವುದೇ ಕಾರಣಕ್ಕೂ ಬಿಬಿಎಂಪಿ ಗೆ ಸ್ಪರ್ಧಿಸಲು ಅವಕಾಶವಿಲ್ಲ.ಬದಲಿಗೆ ಇವರನ್ನು ವಿಧಾನಸಭೆ, ಪರಿಷತ್, ಲೋಕಸಭೆ ಮೊದಲಾದ ಚುನಾವಣೆಗೆ ಸ್ಪರ್ಧಿಸುವ ವೇಳೆ ಪರಿಗಣಿಸಬೇಕು.
ಪಕ್ಷಕ್ಕೆ ದುಡಿದವರು, ಯುವ ಮುಖಗಳು, ಮತದಾರರ ಜೊತೆ ಉತ್ತಮ ಸಂಪರ್ಕ ಹೊಂದಿದವರು, ಸಚ್ಚಾರಿತ್ರತೆ, ಉತ್ತಮ ಶಿಕ್ಷಣ, ಸಾಮಾಜಿಕ ಹಿನ್ನೆಲೆ, ಬದ್ದತೆ, ಆರ್‍ಎಸ್‍ಎಸ್ ಮತ್ತು ಸಂಘ ಪರಿವಾರದ ಹಿನ್ನೆಲೆ ಸೇರಿದಂತೆ ಉತ್ತಮರನ್ನೇ ಅಭ್ಯರ್ಥಿಗಳನ್ನಾಗಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಪ್ರತಿ ಚುನಾವಣೆಯಲ್ಲಿ ಹಣವಂತರು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು, ಸಚಿವರು ಇಲ್ಲವೇ ಶಾಸಕರ ಹಿಂಬಾಲಕರು, ಪ್ರಭಾವಿಗಳೇ ಕಣಕ್ಕಿಳಿದು ಗೆದ್ದು ಬರುತ್ತಿದ್ದರು. ಇದರಿಂದಾಗಿ ಮೂಲ ಕಾರ್ಯಕರ್ತರ ಅಸಮಾಧಾನ ಸರ್ವೇ ಸಾಮಾನ್ಯವಾಗಿತ್ತು.
ಜೊತೆಗೆ ಸಿಂಡಿಕೇಟ್ ರಚಿಸಿಕೊಂಡಿರುವ ಬೆಂಗಳೂರು ಪ್ರತಿನಿಸುವ ಹಲವಾರು ಸಚಿವರು ಮತ್ತು ಶಾಸಕರು ಪ್ರತಿ ಚುನಾವಣೆಯಲ್ಲಿ ತಮ್ಮ ಹಿಂಬಾಲಕರಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದರು.
ಬೆಂಗಳೂರು ಪ್ರತಿನಿಸುವ ಯಾವುದೇ ಸಚಿವರ ಲಾಬಿ, ಒತ್ತಡಗಳಿಗೆ ಮಣೆಯದೆ ಪಕ್ಷದಲ್ಲಿ ಸಕ್ರಿಯವಾಗಿರುವವರಿಗೆ ಟಿಕೆಟ್ ಕೊಡಬೇಕು, ಹಿಂಬಾಲಕರು, ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಲೇ ಬಾರದು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಪಕ್ಷ ನಿಷ್ಠರು, ವಿದ್ಯಾವಂತರು, ಸಮಾಜ, ರಾಜ್ಯ, ದೇಶದ ಬಗ್ಗೆ ಕಳಕಳಿ ಹೊಂದಿರುವವರು, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಆರೋಪ ಹೊಂದಿರದವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಈ ಇಬ್ಬರೂ ನಾಯಕರು ಸಭೆಗೆ ತಿಳಿಸಿದರೆಂದು ಗೊತ್ತಾಗಿದೆ.
ಇವರ ಈ ಸಲಹೆಯ ನಂತರ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಕಚೇರಿಯಲ್ಲಿ ಬೆಂಗಳೂರು ಪ್ರತಿನಿಸುವ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಜೊತೆ ನಡೆಸಿದ ಸಭೆಯಲ್ಲಿ ಹಳೆ ಮುಖಗಳ ಬದಲಿಗೆ ಹೊಸಬರನ್ನೇ ಆಯ್ಕೆ ಮಾಡಲಾಗುವುದು ಎಂಬ ನಿರ್ಧಾರಕ್ಕೆ ಬರಲಾಯಿತೆಂದು ಮೂಲಗಳು ತಿಳಿಸಿವೆ.
ತಮ್ಮ ಹಿಂಬಾಲಕರಿಗೆ ಇಲ್ಲವೇ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಯಾರೊಬ್ಬರ ಮೇಲೆ ಪ್ರಭಾವ ಬೀರುವುದಾಗಲಿ ಇಲ್ಲವೇ ಒತ್ತಡ ಹಾಕದಂತೆಯೂ ಪಕ್ಷ ಸಚಿವರು ಮತ್ತು ಶಾಸಕರಿಗೆ ಈಗಾಗಲೇ ಮೌಖಿಕವಾಗಿ ಸೂಚನೆ ಕೊಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬಿಜೆಪಿ
ಈಗಾಗಲೇ ಪಾಲಿಕೆಯಲ್ಲಿ ಒಂದು ಬಾರಿ ಮೇಯರ್, ಉಪಮೇಯರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಕಾರವನ್ನು ಅನುಭವಿಸಿದವರಿಗೆ ಪಕ್ಷದ ಸಂಘಟನೆಗೆ ನಿಯೋಜಿಸುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಸುಮಾರು 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ. ಈ ಬಾರಿ ಯಾವುದೇ ಒತ್ತಡ, ಪ್ರಭಾವಿಗಳಿಗೆ ಮಣೆ ಹಾಕದೆ ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆಯನ್ನೇ ಮಾನದಂಡವಾಗಿಟ್ಟುಕೊಂಡು ಟಿಕೆಟ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಚುನಾವಣೆ: ಇವರಿಗೆ ಮಾತ್ರ ಬಿಜೆಪಿ ಟಿಕೆಟ್!
Previous Articleಈ ವರ್ಷದಿಂದಲೇ ಪೂರ್ವ ಪ್ರಾಥಮಿಕ ತರಗತಿಗಳಿಗೆ NEP ಅನುಷ್ಠಾನ
Next Article ತತ್ತರಿಸಿದ ಬಿಜೆಪಿ.