ಬೆಂಗಳೂರು- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ಅಳವಡಿಸಲಾಗುತ್ತಿರುವ ಫ್ಲೆಕ್ಸ್ ಬ್ಯಾನರ್ ಮತ್ತು ಬಂಟಿಂಗ್ಸ್ ಗಳ ವಿರುದ್ಧ ಸಮರ ಸಾರಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಪ್ರದೇಶ ಕಾಂಗ್ರೆಸ್ ಗೆ ದಂಡ ವಿಧಿಸಿದೆ.
ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದ ಆರೋಪದ ಅಡಿಯಲ್ಲಿ ಅಧಿಕಾರಿಗಳ ವರದಿ ಪಡೆದುಕೊಂಡಿರುವ ಪಾಲಿಕೆ ಆಯುಕ್ತರು ಕೆಪಿಸಿಸಿಗೆ ಐವತ್ತು ಸಾವಿರ ರೂಪಾಯಿ ದಂಡ ವಿವಿಸಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಪ್ರದೇಶ ಕಾಂಗ್ರೆಸ್ ವತಿಯಿಂದ ಫ್ಲೆಕ್ಸ್ ಅಳವಡಿಸಲಾಗಿತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಾಗೂ ರಾಜ್ಯದ ಎಲ್ಲಾ ಪಧಾಧಿಕಾರಿಗಳು ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದರು ಇದನ್ನು ತೆರವುಗೊಳಿಸಿರುವ ಪಾಲಿಕೆಯ ಅಧಿಕಾರಿಗಳು ಈ ಸಂಬಂಧ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಬೆಂಗಳೂರು ರವರಿಗೆ 50,000/- ರೂ.ಗಳ ದಂಡವನ್ನು ವಿಧಿಸಲಾಗಿದ್ದು, ಮಾನ್ಯ ಮುಖ್ಯ ಆಯುಕ್ತರು ರವರ ಖಾತೆಗೆ ದಂಡದ ಮೊತ್ತ ಪಾವತಿಸುವಂತೆ ಸೂಚಿಸಲಾಗಿರುತ್ತದೆ.
ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕಲಾಗುತ್ತಿದೆ ಎಂಬ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ರಮ ಫ್ಲೆಕ್ಸ್ ಹಾಕುವವರ ವಿರುದ್ಧ ಕ್ರಮ ಜರುಗಿಸಲು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ವಿರುದ್ಧ ಸಮರ ಸಾರುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಆಯುಕ್ತರು ಇದೀಗ ಡಿಕೆ ಶಿವಕುಮಾರ್ ಅವರಿಗೆ ದಂಡ ವಿಧಿಸಿದ್ದಾರೆ.