ಬೆಂಗಳೂರು, ಅ.2 – ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿರುವ ಭೂಮಿ ಸಾಫ್ಟ್‌ವೇರ್ (Bhoomi Software) ಮಾದರಿಯಲ್ಲಿ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳು ಸ್ಥಿರಾಸ್ತಿಗಳ ದಾಖಲಾತಿಗಳನ್ನು ಸಂರಕ್ಷಿಸಿ ದುರುಪಯೋಗವನ್ನು ತಡೆಗಟ್ಟಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ಮಾಡಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವಚ್ಛ ಸರ್ವೇಕ್ಷಣ ರಾಜ್ಯಮಟ್ಟದ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇದೇ ಮಾದರಿಯಲ್ಲಿ ನಮ್ಮ ಸ್ವತ್ತು ಎಂಬ ವ್ಯವಸ್ಥೆಯ ಮೂಲಕ ಆಸ್ತಿ ದಾಖಲಾತಿಗಳ ದುರುಪಯೋಗವನ್ನು ತಡೆಯಲು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳು ಸ್ವಾವಲಂಬಿ ಆರ್ಥಿಕತೆಯನ್ನು ರೂಢಿಸಿಕೊಳ್ಳಬೇಕು. ತೆರಿಗೆಯನ್ನು ಹೆಚ್ಚು ವಸೂಲಿ ಮಾಡಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಗುತ್ತಿಗೆದಾರರು ಹಾಗೂ ಕಮಿಷನ್‍ಗೆ ಆದ್ಯತೆ ನೀಡದೆ, ಉತ್ತಮ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಶಾಶ್ವತ ಆಸ್ತಿಗಳು ನಿರ್ಮಾಣಗೊಳ್ಳುತ್ತಿವೆ, ಆರ್ಥಿಕ ಸಬಲೀಕರಣ ಹೆಚ್ಚಾಗಿದೆ, ಪ್ರತಿ ಪಂಚಾಯಿತಿಯಲ್ಲೂ ಸುಮಾರು 5 ಕೋಟಿ ರೂ.ವರೆಗೂ ಕೆಲಸಗಳಾಗುತ್ತಿವೆ. ಸ್ಥಳೀಯವಾಗಿ ಕೆಲಸಗಳನ್ನು ಮಾಡಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಹೇಳಿದರು.
ಪಂಚಮಿತ್ರ ಸಹಾಯ:
ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ,ರಾಜ್ಯದ ಪ್ರತಿಯೊಂದು ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಂಚಮಿತ್ರ ಎಂಬ ಸಹಾಯವಾಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದಾಗಿ ತಿಳಿಸಿದರು.
ಕೈಗಾರಿಕೆ ಮಾಹಿತಿ ತಂತ್ರಜ್ಞಾನ ವಲಯದಂತೆ ಪಂಚಾಯಿತಿಗಳಲ್ಲೂ ಸುಗಮ ಆಡಳಿತಕ್ಕಾಗಿ ನೂತನ ನೀತಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಮುಂದಿನ ವರ್ಷದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿಯನ್ನು ಪಾರದರ್ಶಕವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪಿಡಿಒ ಗಳನ್ನು ಹೆಚ್ಚು ಉತ್ತರದಾಯಿ ಹಾಗೂ ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಜಿಪಿಎಸ್ ಪೆನ್ಸಿಂಗ್ ಅಳವಡಿಸಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿ ಎಲ್ಲಿ ತಿರುಗಾಡುತ್ತಿದ್ದಾರೆ, ಎಷ್ಟು ದಿನ ಕೆಲಸಕ್ಕೆ ಹಾಜರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ, ಅಧಿಕಾರಿ ಕೆಲಸ ಮಾಡಿದ ದಿನಕ್ಕಷ್ಟೆ ವೇತನ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದರು.