ಬೆಂಗಳೂರು,ಮೇ 27-
ಜಲಜೀವನ್ ಮಿಷನ್ ಯೋಜನೆಯಡಿ ನಿಯಮ ಅನುಸಾರ ಕೇಂದ್ರದಿಂದ ರಾಜ್ಯಕ್ಕೆ 3 ಸಾವಿರ ಕೋಟಿ ರೂ.ಬದಲು 117 ಕೋಟಿ ರೂ. ಮಾತ್ರ ನೀಡಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 500 ಕೋಟಿ ರೂ.ಬಾಕಿ ಇದೆ
ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರಕ್ಕೆ ಹಣ ನೀಡುವಂತೆ ಕೋರಲಾಗಿದೆ.ಆದರೆ,
ಸದ್ಯಕ್ಕೆ ನೀವೆ ಹಣ ಕೊಡಿ ಮುಂದಿನ ವರ್ಷ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ವಸ್ತುಸ್ಥಿತಿ ಹೀಗಿರುವಾಗ ಬಿಜೆಪಿಯವರು ದಿನ ಬೆಳಗಾದರೆ ಸುಳ್ಳು ಹೇಳಿಕೊಂಡೆ ರಾಜಕಾರಣ ಮಾಡುತ್ತಾರೆ. ಸತ್ಯ ಮರೆ ಮಾಚುತ್ತಾರೆ. ರಾಜ್ಯದ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆಯ ಬಗ್ಗೆ ದಿಕ್ಕು ತಪ್ಪಿಸುತ್ತಾರೆ ಎಂದು ಟೀಕಿಸಿದರು.
ಗಂಗಾ ಕಲ್ಯಾಣ ಯೋಜನೆ, ಬೋವಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಯಾವ ಲೋಪವೂ ಆಗಿಲ್ಲ ಎಂದು ಆರಂಭದಲ್ಲಿ ವಾದಿಸಿದ್ದರು. ಈಗ ಬೋವಿ ನಿಗಮದ ಹಗರಣದಲ್ಲಿ ಆಸ್ತಿಗಳ ಜಪ್ತಿಯಾಗುತ್ತಿದೆ. ಬಿಜೆಪಿ ಯಾವ ವಿಷಯದಲ್ಲೂ ಸತ್ಯ ಹೇಳುವುದಿಲ್ಲ ಎಂದರು.
ಸುಳ್ಳು ಹರಡುವುದರಲ್ಲಿ ಬಿಜೆಪಿಯವರು ಮಾಸ್ಟರ್ ಡಿಗ್ರಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿಯಿಂದ ನೀಡಲಾಗಿರುವ ಜಾಹೀರಾತಿನಲ್ಲಿ ಸಾಕಷ್ಟು ತಪ್ಪು ಮಾಹಿತಿಗಳಿವೆ. ಸರ್ಕಾರದ ಯೋಜನೆಗಳನ್ನು ಅಂಕಿ ಸಂಖ್ಯೆ ಸಹಿತ ಟೀಕೆ ಮಾಡಲಿ. ಆದರೆ ಸುಳ್ಳು ಮಾಹಿತಿ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಸುಳ್ಳು ಸುದ್ದಿ ಹರಡುವುದಕ್ಕೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಬಿಜೆಪಿಯ ಐಟಿ ಸೆಲ್ ನಿರಂತರವಾಗಿ ಸುಳ್ಳು ಮಾಹಿತಿ ಹರಡುತ್ತಿದೆ. ಆಪರೇಷನ್ ಸಿಂಧೂರ್ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಯಿತು. ಇವರೆಲ್ಲಾ ಹಿಟ್ಲರ್ ವಂಶದ ಸನಾತನಿಗಳು ಎಂದು ಪ್ರಿಯಾಂಕ್ ಟೀಕೆ ಮಾಡಿದರು.
ಮಾನನಷ್ಟ ಮೊಕದ್ದಮೆ ದಾಖಲಿಸುವ ವಿರುದ್ಧ ಬಿಜೆಪಿ ಕೋರ್ಟ್‌ಗೆ ಹೋಗಲಿ. ನಾವು ಸುಳ್ಳಿನ ವಿರುದ್ಧ ಹೋರಾಟ ಮಾಡುತ್ತೇವೆ. ಕೋವಿಡ್ ಹಗರಣದ ಕುರಿತು ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಸಮಿತಿ ವರದಿ ನೀಡಿದೆ. ಬಿಜೆಪಿ ಸರ್ಕಾರದಲ್ಲಿ ಶೇ. 40ರಷ್ಟು ಕಮಿಷನ್ ಹಗರಣವಾಗಿತ್ತು. ಕಾಂಗ್ರೆಸ್ ಪುರಾವೆಗಳೊಂದಿಗೆ ಹೋರಾಟ ನಡೆಸಿತ್ತು. ನಾವು ಯಾವುದೇ ಸುಳ್ಳು ಆರೋಪಗಳನ್ನು ಮಾಡಿರಲಿಲ್ಲ ಎಂದರು.
ಸರ್ಕಾರದಲ್ಲಿ ಸುಳ್ಳಿಗೆ ಕಡಿವಾಣ ಹಾಕಲಾಗುತ್ತದೆ. ಅದಕ್ಕೆ ಬೇಕಾದ ಕಾನೂನನ್ನು ರೂಪಿಸಲಾಗುವುದು. ಇನ್ನೂ ಮುಂದೆ ಬಿಜೆಪಿಯವರಿಗೆ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲ. ಕಾನೂನು ದುರುಪಯೋಗವಾಗದಂತೆ ಎಚ್ಚರಿಕೆಯನ್ನೂ ವಹಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಕೇಂದ್ರ ಅಥವಾ ಬಿಜೆಪಿ ಸರ್ಕಾರದಲ್ಲಿ ಎಷ್ಟು ಜನ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಅವರ ಬಳಿ ಇಲ್ಲವೇ? ಕಲಬುರಗಿ ಜಿಲ್ಲಾಧಿಕಾರಿ ಘಾಸಿಯಾ ತಬರಮ್ ರನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾಡಿರುವ ಟೀಕೆ ಮನುಸ್ಮೃತಿಯ ಪ್ರತೀಕ ಎಂದು ವಾಗ್ದಾಳಿ ನಡೆಸಿದರು.
ಘಾಸಿಯಾ ತಬರಮ್ ಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪಾಕಿಸ್ತಾನದಿಂದ ಬಂದಿದ್ದಾರಾ ಎಂದು ರವಿ ಕುಮಾರ್ ಪ್ರಶ್ನೆ ಮಾಡಿದ್ದಾರೆ. ನಂತರ ಕ್ಷಮೆಯನ್ನೂ ಕೇಳಿದ್ದಾರೆ.ಇವರು ಮನುಸತಿ ಮನಸ್ಥಿತಿಯವರು. ಆರ್ ಎಸ್ ಎಸ್ ಗರಡಿಯಲ್ಲಿ ಬೆಳೆದಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಅವಕಾಶ ಇದ್ಯಾ. ಹಾಗಾಗಿ ಟೀಕೆ ಮಾಡುತ್ತಾರೆ ಎಂದು ವಿಶ್ಲೇಷಿಸಿದರು
Previous Articleಹೆಬ್ಬಾರ್, ಸೋಮಶೇಖರ್ ಗೆ ಬಿಜೆಪಿ ಗೇಟ್ ಪಾಸ್.
Next Article ಇವರಿಗೆ ಮಾತ್ರ ಮಾಸ್ಕ್ ಕಡ್ಡಾಯ.
