ಬೆಂಗಳೂರು,ಜ.5: ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹಳೆ ಪ್ರಕರಣಗಳ ಹೆಸರಲ್ಲಿ ಕರ ಸೇವಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ (BJP) ಕಾರ್ಯಕರ್ತರು ನಾನು ಕರ ಸೇವಕ ನನ್ನನ್ನು ಬಂಧಿಸಿ ಎಂದು ಬಿಜೆಪಿ ಆರಂಭಿಸಿರುವ ಅಭಿಯಾನಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ಪೋಟೋಗಳಿಗೆ ನಾನು ಭ್ರಷ್ಟ ನನ್ನನ್ನು ಬಂಧಿಸಿ ಎಂಬ ಅಡಿ ಬರಹ ಹಾಕಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.
ನಾನೂ ಕರ ಸೇವಕ ನನ್ನನ್ನೂ ಬಂಧಿಸುವಂತೆ ಆಗ್ರಹಿಸಿ ಪೋಸ್ಟರ್ ಹಿಡಿದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಭಟನೆ ನಡೆಸಿದ್ದರು. ಈಗ ಕಾಂಗ್ರೆಸ್ ನಾನು ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದೇನೆ. 40 ಸಾವಿರ ಕೋಟಿ ಅಕ್ರಮದಲ್ಲಿ ಪಾಲುದಾರನಾಗಿದ್ದೇನೆ ನನ್ನನ್ನೂ ಬಂಧಿಸಿ ಎಂದು ವಿಜಯೇಂದ್ರ ಅವರ ಕೈಯಲ್ಲಿ ನಾಮಫಲಕ ಹಿಡಿದಿರುವ ರೀತಿಯಲ್ಲಿ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹರಿಬಿಟ್ಟಿದೆ.
ಬಿಜೆಪಿ ನಾಯಕರು ನನ್ನನ್ನೂ ಬಂಧಿಸಿ ಎಂದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಎಡಿಟ್ ಮಾಡಿ ಎಕ್ಸ್ ಖಾತೆಯಲ್ಲಿ ಹರಿಬಿಟ್ಟಿರುವ ಕಾಂಗ್ರೆಸ್, ಬಿಜೆಪಿ ನಾಯಕರು ನಿಜವಾಗಿಯೂ ಈ ನಾಮಫಲಕಗಳನ್ನು ಹಿಡಿದು ಈ ರೀತಿ ಪೋಸ್ಟರ್ ಇರಬೇಕು ಎಂದು ವ್ಯಂಗ್ಯಭರಿತವಾಗಿ ಹೇಳಿದೆ.
ಅದೇ ರೀತಿ ಬಿಜೆಪಿ ಮುಖಂಡ ಸಿ.ಟಿ. ರವಿ ನಡೆಸಿದ ಫೊಟೊವನ್ನು ಎಡಿಟ್ ಮಾಡಿ ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ. ನನ್ನನ್ನೂ ಬಂಧಿಸಿ ಎಂದು ತಿರುರೇಟು ನೀಡಿದೆ. ಸಿ.ಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದರೆ ಬೇರೆ ಕಾರಣಗಳು ಇವೆ ಅಲ್ಲವೆ ಎಂದು ಟಾಂಗ್ ನೀಡಿದೆ.
ಮತ್ತೊಂದೆಡೆ ಬಿಜೆಪಿ (BJP) ಮುಖಂಡ ಕೆ.ಎಸ್ ಈಶ್ವರಪ್ಪ ಭಾವಚಿತ್ರವನ್ನೂ ಎಡಿಟ್ ಮಾಡಿ ನಾನು 40 ಪರ್ಸೆಂಟ್ ಕಮಿಷನ್ ನುಂಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಎಕ್ಸ್‌ನಲ್ಲಿ ಲೇವಡಿ ಮಾಡಿದೆ.
ಈಶ್ವರಪ್ಪ ಹಿಡಿಯಬೇಕಾದ ಪೋಸ್ಟರ್ ಇದಾಗಿದ್ದು, ಕೋರ್ಟ್‌ನಲ್ಲಿ ಬಿಜೆಪಿಗರ ಅಕ್ರಮಗಳು ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ ಎಂದು ಹೇಳಿದೆ.
ಮತ್ತೊಂದೆಡೆ ಲೋಕಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ದಾಳಿಕೋರರಿಗೆ ಪಾಸ್ ನೀಡಿ ಸಹಕರಿಸಿದ್ದೇನೆ ನನ್ನನ್ನೂ ಬಂಧಿಸಿ ಎಂದು ಪ್ರತಾಪ್‌ಸಿಂಹ ಅವರ ಕೈಯಲ್ಲಿ ಪೋಸ್ಟರ್ ಹಿಡಿಸಿ ಕಾಂಗ್ರೆಸ್ ಎಡಿಟ್ ಮಾಡಿರುವ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಿದೆ.
ಪ್ರತಾಪ್‌ಸಿಂಹ ಅವರೇ ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ. ನಿಮ್ಮವರೇ ಹೇಳುವ ಧಮ್ಮು, ತಾಖತ್ತು ಪ್ರದರ್ಶಿಸಿ ಎಂದು ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಇನ್ನೊಂದೆಡೆ ಶಾಸಕ ಸುನಿಲ್‌ಕುಮಾರ್ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್, ನಾನು ಪರಶುರಾಮನ ಮೂರ್ತಿಯ ಕಂಚನ್ನು, ಸರ್ಕಾರಿ ಸಿಮೆಂಟ್‌ನ್ನು ಕದ್ದಿದ್ದೇನೆ ನನ್ನನ್ನೂ ಬಂಧಿಸಿ ಎಂದು ಸುನಿಲ್‌ಕುಮಾರ್ ಅವರ ಫೋಟೊವನ್ನು ಎಡಿಟ್ ಮಾಡಿ ಕಾಂಗ್ರೆಸ್ ಬಿತ್ತರಿಸಿದೆ,
ನನ್ನನ್ನೂ ಬಂಧಿಸಿ ಎಂದು ಹೇಳುತ್ತಿರುವ ಸುನಿಲ್‌ಕುಮಾರ್‌ರವರೇ ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೇ ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕೆ ಬಂಧಿಸಬೇಕೇ, ರಾಮನ ಹೆಸರಿನಲ್ಲಿ ರಾವಣ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೆ ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದು ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ALSO READ | Latest Kannada News | News in Kannada