ಬೆಂಗಳೂರು- ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು,ಇದೀಗ ಬಿಜೆಪಿ ಹೈಕಮಾಂಡ್ ಚಿತ್ತ ಕರ್ನಾಟಕದತ್ತ ನೆಟ್ಟಿದೆ.
ಮತಗಟ್ಟೆ ಸಮೀಕ್ಷೆಗಳು ಎರಡೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದು, ಕಮಲ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದೆ.
ಇದೀಗ ಕರ್ನಾಟಕದತ್ತ ಗಮನ ಹರಿಸಿರುವ ಹೈಕಮಾಂಡ್ ನಿನ್ನೆಯೇ ದೆಹಲಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್,ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್,ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಪ್ರಮುಖರ ಸಭೆ ನಡೆದಿದ್ದು, ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಕೈಗೊಳ್ಳಬೇಕಾದ ರಣತಂತ್ರದ ಕುರಿತು ಚರ್ಚೆ ನಡೆಸಲಾಗಿದೆ.ಇದರಲ್ಲಿ ಒಂದು ನೀಲನಕ್ಷೆಯನ್ನು ಸಿದ್ದ ಪಡಿಸಿದ್ದು ಹಂತಹಂತವಾಗಿ ಅದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಪ್ರಮುಖವಾಗಿ ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲದುರುವುದನ್ನು ಪ್ರಮುಖವಾಗಿ ಅವಲೋಕಿಸಿದ ಸಭೆ ಈ ಜಿಲ್ಲೆಗಳಿಂದ ಸುಮಾರು ನಲವತ್ತು ಸೀಟುಗಳು ಕೊರತೆಯಾಗಲಿದ್ದು ಅದನ್ನು ಯಾವ ರೀತಿಯಲ್ಲಿ ಸರಿದೂಗಿಸಿಕೊಳ್ಳಬೇಕೆಂಬ ಬಗ್ಗೆ ಪ್ರಮುಖ ಚರ್ಚೆ ನಡೆದಿದೆ.
ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳು ಹಾಗೂ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಿ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸಲು ತಂತ್ರ ರೂಪಿಸಲಾಗಿದೆ. ಇದಕ್ಕಾಗಿ ಗುಜರಾತ್ ಹಾಗೂ ಹಿಮಾಚಲದ ಮಾದರಿಯಲ್ಲಿ ಕೆಲವು ಹಿರಿಯರಿಗೆ ವಿಶ್ರಾಂತಿ ನೀಡುವ ಮೂಲಕ ಆಡಳಿತ ವಿರೋಧಿ ಅಲೆ ಇಲ್ಲವಾಗಿಸುವ ಪ್ರಯತ್ನ ನಡೆಯಲಿದೆ.
ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾರಣವಾದ ಅಂಶಗಳ ಬಗ್ಗೆ ವರದಿ ಹೈಕಮಾಂಡ್ ತಲುಪಿದೆ ಅದೇ ರೀತಿ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಈ ಅಂಶದ ಬಗ್ಗೆ ಒತ್ತು ನೀಡುವಂತೆ ಸಮೀಕ್ಷಾ ವರದಿ ತಿಳಿಸಿದೆ. ಆರ್ ಎಸ್.ಎಸ್ ನ ಸಮೀಕ್ಷಾ ವರದಿ ಕೂಡಾ ಹೈಕಮಾಂಡ್ ತಲುಪಿದೆ ಅದರಲ್ಲೂ ಇವೇ ಅಂಶಗಳು ಪ್ರಮುಖವಾಗಿವೆ.ಹೀಗಾಗಿ ಚುನಾವಣೆಯಲ್ಲಿ ಕೆಲವು ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಕೆಲವು ಶಾಸಕರು ಆಡಳಿತ ವಿರೋಧ ಅಲೆ ಎದುರಿಸುತ್ತಿದ್ದು, ಸುಮಾರು 25ರಿಂದ 30 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. 5ರಿಂದ 6 ಬಾರಿ ಗೆದ್ದವರನ್ನು ಪಕ್ಷ ಸಂಘಟನೆಗೆ ನಿಯೋಜನೆ ಮಾಡಿಕೊಳ್ಳಲು ಚಿಂಥನ-ಮಂಥನ ಆರಂಭವಾಗಿದೆ
ಪ್ರಮುಖವಾಗಿಬಿ.ಎಸ್.ಯಡಿಯೂರಪ್ಪ (ಶಿಕಾರಿಪುರ) ಕೆ.ಎಸ್.ಈಶ್ವರಪ್ಪ ( ಶಿವಮೊಗ್ಗ ನಗರ)
ಗೋವಿಂದ ಕಾರಜೋಳ (ಮುದೋಳ)
ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ)
ಎಸ್.ಅಂಗಾರ (ಸುಳ್ಯ)
ಆರ್.ಅಶೋಕ್(ಪದ್ಮನಾಭನಗರ)
ವಿ.ಸೋಮಣ್ಣ (ಗೋವಿಂದರಾಜನಗರ)
ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ )
ಎಸ್.ಎ.ರವೀಂದ್ರನಾಥ್( ದಾವಣಗೆರೆ ಉತ್ತರ)
ಆರಗ ಜ್ಞಾನೇಂದ್ರ (ತೀರ್ಥಹಳ್ಳಿ )
ಎಸ್.ಸುರೇಶ್‍ಕುಮಾರ್ ( ರಾಜಾಜಿನಗರ)
ಎಸ್.ಎ.ರಾಮದಾಸ್( ಕೃಷ್ಣರಾಜ)
ಬಸನಗೌಡ ಪಾಟೀಲ್ ಯತ್ನಾಳ್( ಬಿಜಾಪುರ)
ತಿಪ್ಪಾರೆಡ್ಡಿ (ಚಿತ್ರದುರ್ಗ) ಸೇರಿದಂತೆ ಕೆಲವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಯಿದೆ.ಈ ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಆಡಳಿತ ವಿರೋಧಿ ಅಲೆ ಇಲ್ಲವಾಗಿಸುವ ತಂತ್ರ ರೂಪುಗೊಂಡಿದೆ
ಹಿಂದುತ್ವ-ಅಭಿವೃದ್ಧಿ ಕಾರ್ಯಸೂಚಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರವಾಗಿಸಲು ತೀರ್ಮಾನಿಸಲಾಗಿದೆ.ಒಂದೆಡೆ ಪಕ್ಷದ ಧ್ವಜದಡಿ ಸಾಲು ಸಾಲು ಸಂಘಟನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಲಿತ, ವಾಲ್ಮೀಕಿ,ಯಾದವ, ಹಿಂದುಳಿದ ಸಮುದಾಯದ ಮತ ಕ್ರೋಡೀಕರಿಸುವ ಸಮಾವೇಶಗಳು, ನೇಕಾರ, ಮೀನುಗಾರ ಮತ್ತು ಸ್ತ್ರೀಶಕ್ತಿ ಸಮಾವೇಶಗಳನ್ನು ಆಯೋಜಿಸುವುದು ಇವುಗಳಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಸ್ಮೃತಿ ಇರಾನಿ,ಯೋಗಿ ಆದಿತ್ಯನಾಥ್,ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರನ್ನು ಆಹ್ಚಾನಿಸಲು ನಿರ್ಧರಿಸಲಾಗಿದೆ.
ಇದಲ್ಲದೆ ಸಂಘ ಪರಿವಾರದ ಅಂಗ ಸಂಘಟನೆಗಳ ಮೂಲಕ ಹಿಂದೂ ಸಮಾಜೋತ್ಸವ ಸೇರಿದಂತೆ ಹಲವು ಹಿಂದೂ ಪರ ಸಮಾವೇಶಗಳನ್ನು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸುವ ಮೂಲಕ ಮತಗಳನ್ನು ಕ್ರೋಡೀಕರಿಸಿವ ಪ್ರಯತ್ನ ನಡೆಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.
ಈ ಎಲ್ಲವನ್ನೂ ಸಮರ್ಥವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲೂ ಮಹತ್ವದ ಬದಲಾವಣೆಗೆ ಸಿದ್ದತೆ ನಡೆಸಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ, ಸಹ ಉಸ್ತುವಾರಿ ಹಾಗೂ ಹಿರಿಯರಿಗೆ ಕೋಕ್ ನೀಡುವ ಸಂಭವ ಹೆಚ್ಚಾಗಿದೆ. ಸರ್ಕಾರ ಮತ್ತು ಪಕ್ಷದಲ್ಲಿನ ಕೆಲ ಯುವ ಮುಖಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಚಿಂತನೆ ನಡೆದಿದೆ
ಹಾಲಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಬದಲಿಗೆ ಪ್ರಮುಖ ಸಮುದಾಯದ ಪ್ರಭಾವಿಗಳಿಗೆ ಮಣೆ ಹಾಕುವ ನಿರೀಕ್ಷೆ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರ ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಿಯಲ್ಲಿವೆ.
ಈ ಎಲ್ಲಾ ಬದಲಾವಣೆ ಮಾಡಿಕೊಂಡು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಕಟ್ಟಿ ಹಾಕುವ ತಂತ್ರಗಾರಿಕೆಗೆ ಕೈ ಹಾಕಲಿದೆ..
Previous Articleಮೈಸೂರಿನ ಹಲವರಿಗೆ ಉಗ್ರ ಸಂಘಟನೆಗಳಿಂದ ಹಣ
Next Article ಹೆಲ್ಮೆಟ್ ಧರಿಸದ ಪೊಲೀಸ್ ಸಸ್ಪೆಂಡ್