ಬೆಂಗಳೂರು,ಜ.29- ಲೋಕಸಭಾ ಚುನಾವಣೆ ಸನಿಹದಲ್ಲಿರುವ ಸಮಯದಲ್ಲಿ ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ನಡೆದ ಹನುಮಧ್ವಜ ತೆರವು ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಕೇಸರಿ ಪ್ರಯೋಗಕ್ಕೆ ಮುಂದಾಗಿದೆ.
ಬಿಜೆಪಿಯ ಈ ಪ್ರಯತ್ನಕ್ಕೆ ಈ ಬಾರಿ ಜೆಡಿಎಸ್ ಕೂಡ ಸಾಥ್ ನೀಡಿರುವುದು ಕುತೂಹಲ ಮೂಡಿಸಿದೆ.ಧ್ವಜ ತೆರವು ವಿರೋಧಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾದರು.
ಈ ಮೂಲಕ ಧ್ವಜ ತೆರವುಗೊಳಿಸಿದ ಪ್ರಕರಣದ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದರು.
ರಾಜಧಾನಿ ಬೆಂಗಳೂರಿನಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ ಅತ್ತ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಸಿದರು.
ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಾದ ಭಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ಮತ್ತಿತರರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.
ಬೆಳಗ್ಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆರ್.ಅಶೋಕ್, ವಿಧಾನಪರಿಷತ್ತಿನ ಸದಸ್ಯರಾದ ಡಾ.ತೇಜಸ್ವಿನಿ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಜನಪ್ರತಿನಿಧಿಗಳು, ಮಾಜಿ ಶಾಸಕರು, ನಗರಪಾಲಿಕೆ ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಚೋದನೆ ಈ ಬೆಳವಣಿಗೆಗೆ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮತ್ತು ಆರ್‍ಎಸ್‍ಎಸ್ ತಮ್ಮ ಅಜೆಂಡಾವನ್ನು ಜಾರಿಗೆ ತರಲು ಅನಗತ್ಯವಾಗಿ ಜನರನ್ನು ಪ್ರಚೋದಿಸುತ್ತಿವೆ ಇದಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡಿದೆ ಎಂದು ಆಪಾದಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಜನರನ್ನು ಪ್ರಚೋದಿಸುತ್ತಿವೆ. ಕೆರಗೋಡಿನಲ್ಲಿ ರಾಷ್ಟ್ರ ಅಥವಾ ರಾಜ್ಯಧ್ವಜ ಹಾಕುತ್ತೇವೆಂದು ಅನುಮತಿ ಪಡೆದಿದ್ದರು. ಅದರ ನಿಯಮ ಉಲ್ಲಂಘನೆ ಮಾಡಿದ್ದರಿಂದಾಗಿ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕಾಯಿತು. ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧ್ವಜಾರೋಹಣ ಮಾಡುತ್ತೇವೆ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಯಾವ ಬಾವುಟ ಹಾರಿಸುತ್ತೇವೆ ಎಂದು ಅನುಮತಿ ಪಡೆದಿದ್ದಾರೆಯೋ ಅದನ್ನು ಹಾರಿಸಲು ತಮ್ಮ ಆಕ್ಷೇಪ ಇಲ್ಲ. ಯಾವುದೇ ಧರ್ಮ, ಜಾತಿಯ ಬಾವುಟಗಳಿಗೂ ತಮ್ಮ ವಿರೋಧವಿಲ್ಲ ಎಂದು ತಿಳಿಸಿದರು. ಚುನಾವಣೆ ಹೊರತುಪಡಿಸಿದರೆ ಇದರ ಹಿಂದೆ ಬೇರೆ ಯಾವ ಕಾರಣಗಳಿಲ್ಲ. ನನ್ನ ವಿರುದ್ಧ ಆರೋಪ ಮಾಡಲು ವಿರೋಧಪಕ್ಷದವರಿಗೆ ಬೇರೆ ಕಾರಣಗಳು ಸಿಕ್ಕಿಲ್ಲ. ಹಾಗಾಗಿ ಹಿಂದೂ ವಿರೋಧಿ ಎಂದು ಟೀಕೆ ಮಾಡುತ್ತಾರೆ.ನಾನೊಬ್ಬ ಹಿಂದು. ನಾನು ಎಲ್ಲಾ ಜನರನ್ನೂ ಮತ್ತು ಎಲ್ಲಾ ಧರ್ಮವನ್ನೂ ಪ್ರೀತಿಸುತ್ತೇನೆ ಎಂದರು.