ಬೆಂಗಳೂರು.
ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೆ ಚುನಾವಣಾ ಆಯೋಗ (Election Commission) ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕರು ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರಕ್ಕೆ ಸಜ್ಜುಗೊಳ್ಳತೊಡಗಿದ್ದಾರೆ.
ಕಳೆದ ಚುನಾವಣೆಯ ಸಮಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾಗಿದ್ದ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಭಾರಿ ನಿರೀಕ್ಷೆಯೊಂದಿಗೆ BJP ಸೇರಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಯಾದವ ಮತ್ತು ಮಹಿಳಾ ಪ್ರಾತಿನಿಧ್ಯದಡಿ ಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದರು. ಮೊನ್ನೆ ಮೊನ್ನೆಯವರೆಗೂ ಮಂತ್ರಿ ಸ್ಥಾನದ ಆಸೆ ಹುಟ್ಟಿಸಿದ್ದ BJP ನಾಯಕರು ನಂತರದಲ್ಲಿ ಈ ಕುರಿತಾದ ಮಾತುಕತೆಯೇ ನಡೆಸಿಲ್ಲ.
ಒಟ್ಟಾರೆ BJP ಯಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಅವರು ಮತ್ತೆ ತಮ್ಮ ಮಾತೃ ಪಕ್ಷಕ್ಕೆ ಮರಳುವ ಬಗ್ಗೆ ಚಿಂತನೆ ಆರಂಭಿಸಿದ್ದಾರೆ. ಈ ಸಂಬಂಧ ತಮ್ಮ ಬೆಂಬಲಿಗರು, ಹಿತೈಷಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿರುವ ಅವರು, ಕ್ಷೇತ್ರದಲ್ಲಿ ಮತದಾರರ ಅಭಿಪ್ರಾಯ ಆಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
Congress ನಲ್ಲಿರುವ ಪೂರ್ಣಿಮಾ ಅವರ ತಂದೆ ಕೃಷ್ಣಪ್ಪ ಅವರ ಆಪ್ತರು ಪೂರ್ಣಿಮಾ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. BJP ಯಲ್ಲಿ ತಳ ಸಮುದಾಯದವರಿಗೆ ಮನ್ನಣೆ ಸಿಗುವುದಿಲ್ಲ. ನಿಮ್ಮ ತಂದೆ ಅವರಿಗೆ ಕಾಂಗ್ರೆಸ್ ಎಲ್ಲಾ ಸ್ಥಾನಮಾನ, ಗೌರವ ನೀಡಿ ಅವರೊಬ್ಬ ಹಿಂದುಳಿದ ಸಮುದಾಯದ ನಾಯಕರೆಂದು ಪರಿಗಣಿಸಿತ್ತು. ತಾವು ಪಕ್ಷಕ್ಕೆ ಮರಳಿದರೆ ಇಂತಹದೇ ಸ್ಥಾನಮಾನ ಗೌರವ ಸಿಗಲಿದೆ ಎಂಬ ಆಶ್ವಾಸನೆ ನೀಡಿದ್ದಾರೆನ್ನಲಾಗಿದೆ. BJP ಯಲ್ಲಿ ಮೂಲೆಗುಂಪಾಗಿರುವ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಹಜವಾಗಿ ಈ ಆಶ್ವಾಸನೆ ಹೊಸ ಭರವಸೆ ಮೂಡಿಸಿದೆ ಎನ್ನಲಾಗಿದ್ದು, ಸದ್ಯದಲ್ಲೇ ಅವರು BJP ಗೆ ಗುಡ್ ಬೈ ಹೇಳಿ Congress ಸೇರಲಿದ್ದಾರೆನ್ನಲಾಗಿದೆ.
ಈ ನಡುವೆ ಇವರು ಪ್ರತಿನಿಧಿಸುವ ಹಿರಿಯೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಸುಧಾಕರ್ (D Sudhakar) ಕಣಕ್ಕಿಳಿಯಲು ಸಜ್ಜಾಗಿದ್ದು ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಸಿಗಲಿದೆ. ಹೀಗಿರುವಲ್ಲಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದರೆ ಅವರಿಗೆ ಯಾವ ಸ್ಥಾನಮಾನ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.