ಬೆಂಗಳೂರು, ಡಿ.24- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಎದುರಾಳಿಗಳಿಗೆ ಸೆಡ್ಡು ಹೊಡೆಯಲು ತಂತ್ರ ರೂಪಿಸುತ್ತಿರುವ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ತಂಡ ಪ್ರಕಟಿಸುತ್ತಿದ್ದಂತೆ ಪಕ್ಷದಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ ಬಹಿರಂಗಗೊಂಡಿದೆ.
ಬಿಜೆಪಿ ಪದಾಕಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಯಾಗಿದೆ.ಈ ಪದಾಕಾರಿಗಳ ಪಟ್ಟಿಯಲ್ಲಿ 14ಕ್ಕೂ ಹೆಚ್ಚು ಯಡಿಯೂರಪ್ಪ ಆಪ್ತರಿಗೆ ಸ್ಥಾನ ನೀಡಲಾಗಿದೆ. ಹಾಗೂ ಮೂವರು ವಿಜಯೇಂದ್ರ ಆಪ್ತರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಯಡಿಯೂರಪ್ಪ ಅವರ ವಿರೋಧಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎದಿರೇಟು ನೀಡುವ ದೃಷ್ಟಿಯಿಂದ ಅವರ ಕಡು ವಿರೋಧಿ ಮುರುಗೇಶ್ ನಿರಾಣಿ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಹಾಗೂ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಯುವ ಮುಖಗಳಾದ ಪಿ.ರಾಜೀವ್, ಜೆ.ಪ್ರೀತಮ್ ಗೌಡ, ಡಿ.ಎಸ್.ಅರುಣ್, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು ಅವರಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ.ಆಪರೇಷನ್ ಕಮಲ’ದ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಬೈರತಿ ಬಸವರಾಜ್, ಎನ್. ಮಹೇಶ್, ವರ್ಷದ ಹಿಂದೆಯಷ್ಟೇ ಕಮಲ ಪಾಳಯಕ್ಕೆ ಸೇರಿಕೊಂಡಿದ್ದ ಮಂಡ್ಯದ ಲಕ್ಷ್ಮಿ ಅಶ್ವಿನಿ ಗೌಡ ಅವರೂ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಯತ್ನಾಳ್ ಕಿಡಿ ಕಿಡಿ:
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್,, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ ಎಂದು ವಿಶ್ಲೇಷಿಸಿದರು.
ಯಡ್ಡಿಯೂರಪ್ಪನವರದ್ದು ಕೆಜೆಪಿ 1,ಈಗ ಕೆಜೆಪಿ 2 ಆಗಿದೆ, ಮುಂದೆ ಅವರ ಮೊಮ್ಮಗ ಬಂದರೆ ಕೆಜೆಪಿ 3 ಆಗುತ್ತದೆ. ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. 2024ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಹೇಳಿದರು.
ಪದಾಧಿಕಾರಿಗಳ ಸಭೆ:
ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಅಧ್ಯಕ್ಷ ವಿಜಯೇಂದ್ರ, ಬೇರೆಬೇರೆ ಸಮಾಜಗಳು, ಪಂಗಡಗಳು, ಮುಂಬೈ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಎಲ್ಲ ಭಾಗಗಳನ್ನು ಗುರುತಿಸಿ ಪದಾಧಿಕಾರಿಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಬೇಕಾದ ದೊಡ್ಡ ಸವಾಲಿದೆ ಇದಕ್ಕಾಗಿಪಟ್ಟಿಯಲ್ಲಿ ಹೆಚ್ಚು ಯುವಕರಿಗೆ ಆದ್ಯತೆ ಕೊಡಲಾಗಿದೆ. ಹಿರಿಯರಿಗೂ ಅವಕಾಶ ಮಾಡಿಕೊಟ್ಟಿದೆ ಎಂದು ವಿವರಿಸಿದರು.
ಮಂಗಳವಾರ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಎಲ್ಲ ನೂತನ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಮುಂದಿನ ಲೋಕಸಭಾ ಚುನಾವಣೆ ವರೆಗೆ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ, ಒಂದಾಗಿ ಪಕ್ಷದ ಸಂಘಟನೆಗೆ ಬಲ ತುಂಬಬೇಕೆಂಬ ಸಂದೇಶ ಕೊಡಲಿದ್ದೇವೆ ಎಂದು ಹೇಳಿದರು.