ಬೆಂಗಳೂರು,ಸೆ.10-
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟುಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುವುದಾಗಿ ಜನ ಸ್ಪಂದನಾ ಸಮಾವೇಶದಲ್ಲಿ ಬಿಜೆಪಿ ನಾಯಕರು ಘೋಷಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಎಲ್ಲಾ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದರು.
ಕಾರ್ಯಕರ್ತರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಪ್ರಗತಿ ವರದಿಯನ್ನು ಮುಂದಿಟ್ಟರು.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಎರಡು ವರ್ಷದಲ್ಲಿ ಜಾರಿ ಮಾಡಿದ್ದ ಜನಪರ ಯೋಜನೆಗಳು, ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ತಮ್ಮ ಒಂದು ವರ್ಷದ ಆಡಳಿತದಲ್ಲಿ ಜಾರಿಯಾದ ಹೊಸ ಕಾರ್ಯಕ್ರಮಗಳು, ಈ ಕಾರ್ಯಕ್ರಮಗಳ ಪ್ರಗತಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟರು.
ಸರ್ಕಾರದ ಮುಂದಿನ ಗೊತ್ತು ಗುರಿಗಳನ್ನು ಹೇಳುವ ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಏನೇನು ಮಾಡಲಿದೆ ಎಂಬುದರ ಸ್ಥೂಲ ಚಿತ್ರಣವನ್ನು ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟರು.
ಅನ್ನಭಾಗ್ಯಕ್ಕೆ ಕನ್ನ ;
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅನ್ನಭಾಗ್ಯದ ಅವ್ಯವಹಾರ ತನಿಖೆ ನಡೆಸುತ್ತಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವೀಗಿಡಾದರು. ಈ ರೀತಿಯ ಆಡಳಿತದ ಪಾರದರ್ಶಕತೆ ಮತ್ತು ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದ ಆಸೆಗಾಗಿ, ಬಹುಮತವಿಲ್ಲದಿದ್ದರೂ ಜೆಡಿಎಸ್ ಜೊತೆ ಕೈ ಜೋಡಿಸಿದ ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದು, 2023ರ ಚುನಾವಣೆ ವೇಳೆಗೆ ನಾವು ನಮ್ಮ ರಿಪೋರ್ಟ್ ಕಾರ್ಡ್ ಅನ್ನು ನಿಮ್ಮ ಬಳಿ ನೀಡಿ, ಪುನಃ ನಿಮ್ಮ ಆಶೀರ್ವಾದವನ್ನು ಪಡೆಯುತ್ತೇವೆ’ ಎಂದರು.
ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಸ್ಪಂದನೆ ದೊರಕಿದೆ. ಇದು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಕಾಂಗ್ರೆಸ್ನ ಅಧಿಕಾರದ ಕನಸು ಎಂದಿಗೂ ನನಸಾಗದು. ಕಾಂಗ್ರೆಸ್ದ್ದು 100% ಕಮಿಷನ್ ಸರ್ಕಾರ. ಅನ್ನಭಾಗ್ಯ ಚೀಲ ನಿಮ್ಮದು, ಅಕ್ಕಿ ಮೋದಿ ಅವರದ್ದು. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ. ಧಮ್ ಇದ್ರೆ ತಡೀರಿ ಎಂದು ಸವಾಲು ಹಾಕಿದರು.
ಬಿಜೆಪಿ ಶಕ್ತಿ ಪ್ರದರ್ಶನ – ಒಗ್ಗಟ್ಟಿನ ಮಂತ್ರ ಪಠನ
Previous Articleಸಾಲ ತೀರಿಸಲು ದೇವರ ತಾಳಿ ಕದೀತಿದ್ದ ಖದೀಮ
Next Article ಗಣೇಶ ವಿಸರ್ಜನೆ ಗಲಾಟೆ- ಕೊನೆಯಲ್ಲಿ ಅಂತ್ಯ