ಬೆಂಗಳೂರು, ಡಿ.12- ರಾಜಧಾನಿ ಬೆಂಗಳೂರು ನಗರದ ಸುಮಾರು 48 ಶಾಲೆಗಳ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ನಿಗೂಢ ತಾಣದಿಂದ ಈಮೇಲ್ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಬೆನ್ನಲ್ಲೇ ರಾಜ್ಯದ ಶಕ್ತಿ ಕೇಂದ್ರ ರಾಜ ಭವನಕ್ಕ (Raj Bhavan) ಬಾಂಬ್ ಬೆದರಿಕೆ ಹಾಕಲಾಗಿದೆ.
ನಿನ್ನೆ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿ ಬೆದರಿಕೆ ಹಾಕಿದ್ದಾನೆ,
ಕರೆ ಬಂದ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಶ್ವಾನದಳದ ಜೊತೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಾಜಭವನಕ್ಕೆ ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ ತಪಾಸಣೆಯಲ್ಲಿ ಅದು ಹುಸಿ ಕರೆ ಎನ್ನುವುದು ಪತ್ತೆಯಾಗಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಆದರೂ, ಬೆದರಿಕೆ ಕರೆ ಹಿನ್ನೆಲೆಯಲ್ಲಿ ಇನ್ನೂ ಕಟ್ಟೆಚ್ಚರ ವಹಿಸಿದ್ದಾರೆ.
ರಾಜಭವನ ತುಂಬ ವಿಶಾಲವಾದ ಜಾಗವಾಗಿದ್ದು ಯಾವ ಭಾಗದಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನು ಆತ ನೀಡಿಲ್ಲ. ರಾಜಭವನದಲ್ಲಿ ರಾಜ್ಯಪಾಲರು ಮತ್ತು ಸಾಕಷ್ಟು ಸಿಬ್ಬಂದಿ ಇರುತ್ತಾರೆ. ಜತೆಗೆ ಸಾಕಷ್ಟು ಸಂದರ್ಶಕರು ಬರುತ್ತಿರುತ್ತಾರೆ. ಇದೊಂದು ಹುಸಿ ಕರೆಯೇ ಆಗಿರಬಹುದಾದ ಸಾಧ್ಯತೆ ಜಾಸ್ತಿ ಇದೆ. ಆದರೆ, ಹಾಗಂತ ಅದನ್ನು ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ಕಡೆ ತಪಾಸಣೆ ಮಾಡಲಾಗಿದೆ.
ಈ ನಡುವೆ, ರಾಜಭವನಕ್ಕೆ ಯಾವ ನಂಬರ್‌ನಿಂದ ಕರೆ ಮಾಡಲಾಗಿದೆ. ಅದನ್ನು ಮಾಡಿದ್ದು ಯಾರು ಎಂಬ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೊಂದು ಫೋನ್ ಕರೆ ಆಗಿರುವುದರಿಂದ ಆರೋಪಿಯನ್ನು ಪತ್ತೆ ಹಚ್ಚುವ ಸಾಧ್ಯತೆಗಳಿವೆ.