ವಿಜಯಪುರ,ಜೂ.10- ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿದ್ದ ಅಕ್ಕ-ತಮ್ಮನ ಜೋಡಿ ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ರಾಜಶ್ರೀ ಪತಿ ಶಂಕರಗೌಡ ಬಿರಾದಾರ. ಆತನ ಸಹೋದರರಾದ ಅಪ್ಪಾ ಸಾಹೇಬ್ ಬಿರಾದಾರ, ಸಂಗಣ್ಣ ಬಿರಾದಾರ ಹಾಗು ಮಂಜುನಾಥ ಬಿರಾದಾರ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜೂ.6 ರಂದು ಮಕ್ಕಳ ಟಿಸಿ ತರಲು ರಾಜಶ್ರೀ ಯರಗಲ್ಲ ಹಾಗು ಆಕೆಯ ತಮ್ಮ ನಾನಾಗೌಡ ಯರಗಲ್ಲ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ರಾಜಶ್ರೀ ಪತಿ ಶಂಕರಗೌಡ ಹಾಗು ಆತನ ಸಹಚರರು ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು. ಕಳೆದ ರಾತ್ರಿ ಸಿಂದಗಿ ಪಟ್ಟಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೂದಿಹಾಳ ಗ್ರಾಮದ ಶಂಕರಗೌಡ ಬಿರಾದಾರ ಜತೆ ರಾಜಶ್ರೀ ಯರಗಲ್ಲ ಅವರನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ, ಪತ್ನಿ ರಾಜಶ್ರೀಯನ್ನು ಪದೇ ಪದೇ ಪತಿ ಬಿಟ್ಟು ತವರು ಮನೆಗೆ ಬರುತ್ತಿದ್ದರು. ಅಲ್ಲದೇ ಪತಿಯ ಮನೆಯವರು ರಾಜಶ್ರೀಗೆ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ರಾಜಶ್ರೀ ತವರು ಮನೆಯಲ್ಲಿ ಮಕ್ಕಳೊಂದಿಗೆ ಉಳಿದಿದ್ದರು.
ಈ ನಡುವೆ ಪತಿ ಶಂಕರಗೌಡ ಪತ್ನಿಯನ್ನು ಮನೆಗೆ ವಾಪಸ್ ಬಾ ಎಂದು ಕರೆದ್ದನಂತೆ. ಆಕೆ, ಬರದ ಕಾರಣ ಜೂ. 6ರಂದು ರಾಜಶ್ರೀ ತನ್ನ ತಮ್ಮ ನಾನಾಗೌಡ ಜತೆ ಮಕ್ಕಳ ಟಿಸಿ ತರಲು ಪತಿಯ ಊರು ಸಿಂದಗಿಗೆ ಬೈಕ್ನಲ್ಲಿ ಬರುತ್ತಿದ್ದಾಗ ರಾಜಶ್ರೀ ಪತಿ ಶಂಕರಗೌಡ ಹಾಗು ಆತನ ಸಹೋದರರು ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಶಂಕರಗೌಡ ಬಿರಾದಾರ ಕುಟುಂಬದ ಐವರು ಸದಸ್ಯರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.