ಬೆಂಗಳೂರು, ಮಾ.27- ಅಜ್ಜಿ,ಮೊಮ್ಮಗಳಿಗೆ ಬಸ್ ಪ್ರಯಾಣ ಉಚಿತ. ಆದರೆ ಅವರು ಕೊಂಡೊಯ್ಯುತ್ತಿದ್ದ ಲವ್ ಬರ್ಡ್ಸ್ ಗೆ (Love Birds) ಪ್ರಯಣದರ 444 ರೂಪಾಯಿ.. ಇದೇನಿದು ಅಂತಿರಾ ಈ ಸ್ಪೋರಿ ನೋಡಿ.
ಬೆಂಗಳೂರಿನಿಂದ ಸಾಂಸ್ಕೃತಿಕ ನಗರ ಮೈಸೂರಿಗೆ ಪ್ರಯಾಣಿಸಲು ಅಜ್ಜಿ ಮತ್ತು ಮೊಮ್ಮಗಳು ಸಾರಿಗೆ ಸಂಸ್ಥೆಯ ಬಸ್ ಹತ್ತಿದರು.ಸರಿ ರಾಜ್ಯದ ಶಕ್ತಿ ಯೋಜನೆ ಜಾರಿಯಲ್ಲಿದೆ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಹೊರಟ ಅಜ್ಜಿ-ಮೊಮ್ಮಗಳು ಉಚಿತವಾಗಿ ಪ್ರಯಾಣಿಸಿದರೆ,ಅವರು ಕೊಂಡೊಯ್ಯುತ್ತಿದ್ದ ನಾಲ್ಕು ಲವ್ ಬರ್ಡ್ಸ್ಗಳಿಗೆ ಕಂಡಕ್ಟರ್ ಬರೋಬ್ಬರಿ 444 ರೂ. ಟಿಕೆಟ್ ನೀಡಿದ್ದಾರೆ.
ಇಂದು ಬೆಳಗ್ಗೆ 8.18ಕ್ಕೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆಎಸ್ಆರ್ಟಿಸಿ ಬಸ್ ಹತ್ತಿ ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧಾರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದರು.
ಟಿಕೆಟ್ ವಿತರಿಸಿ ಮುಂದೆ ಹೋಗುತ್ತಿದ್ದ ಕಂಡಕ್ಟರ್ ಕ್ಷಣ ಕಾಲ ಅಲ್ಲೇ ನಿಂತು ಅಜ್ಜಿ-ಮೊಮ್ಮಗಳನ್ನು ದಿಟ್ಟಿಸಿದ.ಮೊಮ್ಮಗಳ ಕೈಯಲ್ಲಿದ್ದ ಪಂಚರದೊಳಗಿದ್ದ ನಾಲ್ಕು ಲವ್ ಬರ್ಡ್ ಗಳಿರುವುದನ್ನು ಗಮನಿಸಿದರು.
ತಕ್ಷಣವೇ ಅವುಗಳಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ ಕಂಡಕ್ಟರ್ ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ ಬರೋಬ್ಬರಿ 444 ರೂ ಟಿಕೆಟ್ ಹರಿದಿದ್ದಾರೆ.
ಪಕ್ಷಿಗಳಿಗೆ ಟಿಕೆಟ್ ಪಡೆಯಲು ಅಜ್ಜಿ, ಮೊಮ್ಮಗಳು ಮೊದಲಿಗೆ ತಕರಾರು ಮಾಡಿದ್ದಾರೆ. ಇತರೆ ಪ್ರಯಾಣಿಕರು ಕೂಡಾ ಅವರಿಗೆ ಬೆಂಬಲ ನೀಡಿದ್ದಾರೆ. ಆಗ ಕಂಡಕ್ಟರ್ ತಾವು ಯಾರು ಯಾರಿಗೆ ಟಿಕೆಟ್ ಪಡೆಯಬೇಕು ಎಂಬ ಕುರಿತಾದ ಇಲಾಖೆಯ ಸುತ್ತೋಲೆಯನ್ನು ತೋರಿಸಿದರು. ಅಷ್ಟೇ ಅಲ್ಲ ಎರಡು ವರ್ಷದ ಹಿಂದೆ 2022ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಪಕ್ಷಿಗಳಿಗೆ ಟಿಕೆಟ್ ತಗೊಂಡಿಲ್ಲ ಎಂಬ ಕಾರಣಕ್ಕೆ ದಂಡತೆತ್ತಿದ್ದರು.
ಹೈದರಾಬಾದ್ ನಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಪಂಜರದಲ್ಲಿ ಲವ್ ಬರ್ಡ್ಸ್ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಹಕ್ಕಿಗಳಿಗೆ ತಲಾ ಅರ್ಧ ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಮನವಿ ಮಾಡಿದ್ದರು, ಆದರೆ ಪ್ರಯಾಣಿಕ ಮಾತ್ರ ಅದಕ್ಕೆ ಒಪ್ಪಲಿಲ್ಲ. ಬಳಿಕ ಸಹ ಪ್ರಯಾಣಿಕರು ಕೂಡ ಪಕ್ಷಿಗಳಿಗೆ ಟಿಕೆಟ್ ಇಲ್ಲ ಎಂದು ವಾದ ಮಾಡಿದ್ದರು. ಬಳಿಕ ಕಂಡಕ್ಟರ್ ಸುಮ್ಮನಾಗಿದ್ದ. ಆದರೆ ದಾರಿ ಮಧ್ಯೆದಲ್ಲಿ ಟಿಕೆಟ್ ಚೆಕ್ ಮಾಡುವ ಸಿಬ್ಬಂದಿ ಬಸ್ ಹತ್ತಿ ಬಂದು ಚೆಕ್ ಮಾಡಿದಾಗ ಪಕ್ಷಿಗಳಿಗೆ ಯಾವುದೇ ರೀತಿಯ ಟಿಕೆಟ್ ತೆಗೆದುಕೊಂಡಿಲ್ಲವೆಂಬುದು ಕಂಡಕ್ಟರ್ಗೆ ದಂಡ ವಿಧಿಸಿದ್ದರು.
ಈ ಘಟನೆಯನ್ನು ವಿವರಿಸುತ್ತಿದ್ದಂತೆ ಎಲ್ಲರೂ ಸುಮ್ಮನಾದರು.ನಂತರ ಅಜ್ಜಿ ತಮ್ಮೊಂದಿಗೆ ತಂದಿದ್ದ ಪಕ್ಷಿಗಳಿಗೆ ಟಿಕೆಟ್ ಪಡೆದು ಹಣ ನೀಡಿದರು.
ಸರ್ಕಾರದ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ.