ಬೆಂಗಳೂರು: ರಾಜಧಾನಿಯ ಹಲವು ಭಾಗಗಳಲ್ಲಿ ಫೆಬ್ರವರಿ 5 ಮತ್ತು 6 ರಂದು ಸತತ 24 ಗಂಟೆಗಳ ಕಾಲ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಸರಕ್ಕಿ ಬಳಿ ಹಳೆಯ ಪೈಪ್‌ಲೈನ್‌ಗಳ ಬದಲಾಗಿ ಹೊಸದಾಗಿ 1200 ಮಿ.ಮೀ, 900 ಮಿ.ಮೀ ಮತ್ತು 700 ಮಿ.ಮೀ ವ್ಯಾಸದ ಮೈಲ್ಡ್ ಸ್ಟೀಲ್ ಪೈಪ್‌ಲೈನ್‌ಗಳನ್ನು ಜೋಡಿಸುವ (Linking) ಕಾಮಗಾರಿಯನ್ನು ಜಲಮಂಡಳಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲ ಮತ್ತು ಎರಡನೇ ಹಂತದ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ನೀರಿನ ವ್ಯತ್ಯಯದ ಸಮಯ
ಆರಂಭ: 05-02-2026, ಗುರುವಾರ ಬೆಳಗ್ಗೆ 06:00 ಗಂಟೆಯಿಂದ.
ಅಂತ್ಯ: 06-02-2026, ಶುಕ್ರವಾರ ಬೆಳಗ್ಗೆ 06:00 ಗಂಟೆಯವರೆಗೆ.
ಜಲಮಂಡಳಿಯು ಈ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಅಂದು ಬೇಕಾಗುವಷ್ಟು ನೀರನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಲು ಕೋರಲಾಗಿದೆ. ಕಾಮಗಾರಿಯಿಂದ ಉಂಟಾಗುವ ಅನಾನುಕೂಲಕ್ಕೆ ಮಂಡಳಿಯು ವಿಷಾದ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದೆ.

