ಬೆಂಗಳೂರು,
ರಾಜ್ಯ ಕಾಂಗ್ರೆಸ್ ನಲ್ಲಿ ಬೆಳವಣಿಗೆಗಳು ನಡೆದಿರುವಂತೆ ಪ್ರತಿಪಕ್ಷ ಬಿಜೆಪಿಯಲ್ಲೂ ಕೂಡ ವಿದ್ಯಮಾನಗಳು ಚುರುಕು ಪಡೆದುಕೊಂಡಿವೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎಂದು ಪಣತೊಟ್ಟಿರುವ ವಿಜಯೇಂದ್ರ ಇದಕ್ಕಾಗಿ ಹೈಕಮಾಂಡ್ ಮೊರೆಹೊಕ್ಕಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಹಾಗೂ ಹಲವು ರಾಜ್ಯಗಳ ಅಧ್ಯಕ್ಷ ಸ್ಥಾನ ಘೋಷಣೆ ಬಾಕಿ ಉಳಿಸಿಕೊಂಡಿರುವ ಹೈಕಮಾಂಡ್ ಇದೀಗ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನಿತಿನ್ ನಬಿನ್ ಅವರನ್ನು ನೇಮಕ ಮಾಡಿದ ಬೆನ್ನೆಲ್ಲೇ ಬಾಕಿ ಇರುವ ರಾಜ್ಯಗಳ ಅಧ್ಯಕ್ಷರನ್ನು ನೇಮಕ ಮಾಡುತ್ತಿದೆ.
ಅದೇ ರೀತಿ ಕರ್ನಾಟಕದ ಬಿಜೆಪಿ ಅಧ್ಯಕ್ಷರ ಅಧಿಕೃತ ಘೋಷಣೆ ಕೂಡ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಎಂದು ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಯಡಿಯೂರಪ್ಪ ಈಗಾಗಲೇ ವರಿಷ್ಠರಿಗೆ ಮನವಿ ಮಾಡಿದ್ದಾರೆ ಇದರ ಮುಂದುವರೆದ ಭಾಗವಾಗಿ ವಿಜಯೇಂದ್ರ ಇದೀಗ ದೆಹಲಿಗೆ ಆಗಮಿಸಿದ್ದು ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿ ತಮ್ಮನ್ನು ರಾಜ್ಯಾಧ್ಯಕ್ಷ ಎಂದು ವಿದ್ಯುಕ್ತವಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.
ವಿಜಯೇಂದ್ರ ಅವರು ಪಕ್ಷದ ಅಧ್ಯಕ್ಷರಾಗಿ ಈಗಾಗಲೇ ಎರಡು ವರ್ಷ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಹೀಗಾಗಿ ಮತ್ತೆ ರಾಜ್ಯಾಧ್ಯಕ್ಷ ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ ಅಂದಿನಿಂದ ಮೂರು ವರ್ಷದವರೆಗೆ ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ.
ಆದರೆ ವಿಜಯೇಂದ್ರ ವಿರೋಧಿ ಬಣ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿರುವ ಭಿನ್ನಮತಿಯ ನಾಯಕರು ಹಲವಾರು ಬಾರಿ ವರಿಷ್ಠರನ್ನು ಭೇಟಿ ಮಾಡಿ ಪಕ್ಷದ ಅಧ್ಯಕ್ಷರ ಬದಲಾವಣೆಗೆ ಮನವಿ ಮಾಡಿದ್ದರು
ಆದರೆ ಇದೀಗ ಈ ಭಿನ್ನಮತೀಯ ನಾಯಕರು ತಮ್ಮ ಬೇಡಿಕೆಯನ್ನು ಬದಲಾಯಿಸಿದ್ದಾರೆ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲು ನಾವು ಯಾವುದೇ ರೀತಿಯ ತಕರಾರು ಮಾಡುವುದಿಲ್ಲ ಇವರ ಅಧಿಕಾರಾವಧಿ ಇನ್ನು ಒಂದು ವರ್ಷ ಬಾಕಿ ಇದ್ದು ಅದನ್ನು ಪೂರ್ಣಗೊಳಿಸಲಿ ಆದರೆ ಯಾವುದೇ ಕಾರಣಕ್ಕೂ ಅವರನ್ನು ಈಗ ಪಕ್ಷದ ಅಧ್ಯಕ್ಷ ಎಂದು ಘೋಷಣೆ ಮಾಡಬಾರದು ಚುನಾವಣೆಯ ಸಮಯದಲ್ಲಿ ಪಕ್ಷಕ್ಕೆ ನೇಮಕವಾಗಬೇಕು ಎಂದು ಮನವಿ ಮಾಡಿದ್ದಾರೆ.
ವಿಜಯೇಂದ್ರ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪ ಮಾಡುತ್ತಿರುವ ಈ ನಾಯಕರು ಈಗ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಕೂಡ ಅವರು ಅಧ್ಯಕ್ಷರಾಗಿರುತ್ತಾರೆ. ಚುನಾವಣೆಯಲ್ಲಿ ಅವರು ಹೊಂದಾಣಿಕೆ ಮಾಡಿಕೊಳ್ಳುವುದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವಾದಿಸುತ್ತಿದ್ದಾರೆ.
ಆದರೆ ಈ ಆರೋಪಗಳನ್ನೆಲ್ಲ ತಳ್ಳಿ ಹಾಕಿರುವ ವಿಜಯೇಂದ್ರಅವರು ಹಲವು ಹಿರಿಯ ನಾಯಕರ ಅಸಹಕಾರದ ನಡುವೆಯೂ ತಾವು ರಾಜ್ಯ ಸರ್ಕಾರದ ವಿರುದ್ಧ ಯಶಸ್ವಿ ಹೋರಾಟಗಳನ್ನು ನಡೆಸಿದ್ದೇನೆ ಈಗ ಪಕ್ಷದ ಅಧ್ಯಕ್ಷರಾಗಿ ತಮ್ಮನ್ನು ವಿದ್ಯುಕ್ತವಾಗಿ ಘೋಷಣೆ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದು ವಾಗ್ದಾನ ಮಾಡುತ್ತಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಮಾಜಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ತಮ್ಮನ್ನು ಪಕ್ಷದ ಅಧ್ಯಕ್ಷ ಎಂದು ಘೋಷಿಸಲು ಸಹಕರಿಸಬೇಕು ಎಂದು ಮನವಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

