ಬೆಂಗಳೂರು,ಆ.1:
ವಿದ್ಯಾರ್ಥಿಗಳು ಕುಡಿಯಲು ಬಳಸುವ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ಕ್ರಿಮಿನಾಶಕ ಮಿಶ್ರಣ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಹೂವಿನಕೋಣೆ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಜೈಲಿಗೆ ತಳ್ಳುವಂತೆ ಸೂಚನೆ ನೀಡಿದ್ದಾರೆ.
ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇದೆ. ಒಂದು ಕುಡಿಯುವ ನೀರಿನ ಟ್ಯಾಂಕ್, ಇನ್ನೊಂದು ಊಟದ ನಂತರ ಕೈ ತೊಳೆಯುವ ನೀರಿನ ಟ್ಯಾಂಕ್ಗಳಾಗಿವೆ. ಇದರಲ್ಲಿ ಗುರುವಾರ ಊಟಕ್ಕೂ ಮುನ್ನ ವಿದ್ಯಾರ್ಥಿಗಳು ಕೈ ತೊಳೆಯಲು ಹೋದಾಗ ನೀರು ವಾಸನೆ ಬಂದಿದೆ. ಅಲ್ಲದೆ, ನೀರು ಬಿಳಿ ಬಣ್ಣದಲ್ಲಿ ಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಕ್ಷಣವೇ ಬಿಸಿಯೂಟ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ಗಮನಿಸಿದ ಬಿಸಿಯೂಟ ಸಿಬ್ಬಂದಿ ನೀರಿನಲ್ಲಿ ಕ್ರಿಮಿನಾಶಕ ಬೆರೆತಿದೆ ಎಂಬ ಅಂಶವನ್ನು ಪತ್ತೆಹಚ್ಚಿ ಯಾವುದೇ ಮಕ್ಕಳು ನೀರು ಕುಡಿಯದಂತೆ ಸೂಚನೆ ನೀಡಿದ್ದಾರೆ ಅಲ್ಲದೆ ವಿಷಯವನ್ನು ತಕ್ಷಣವೇ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ ಅವರು ತಕ್ಷಣ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಲೆ ಶಾಲೆಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಹೊಸನಗರ ಪಿಎಸ್ಐ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ ನೀಡಿದ್ದಾರೆ.
ಈ ವೇಳೆ ನೀರಿನ ಟ್ಯಾಂಕ್ಗೆ ಕಳೆ ನಾಶಕವನ್ನು ಮಿಶ್ರಣ ಮಾಡಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಅಕ್ಷಮ್ಯ:
ಇನ್ನು ಘಟನೆಯ ಕುರಿತು ದಿಗ್ಭಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಒಂದು ಅಕ್ಷಮ್ಯ ಕೃತ್ಯ ಇದನ್ನು ಮಾಡಿರುವ ದುಷ್ಕರ್ಮಿಗಳು ಯಾರೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹತ್ತಾರು ಎಳೆಯ ಮಕ್ಕಳ ಮಾರಣ ಹೋಮ ನಡೆಸುವ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ
ಅಡುಗೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಘಟಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಶಾಲೆಯ ಅಡುಗೆ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ
ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ.
ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ನಡುವೆ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಷೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ
Previous Articleಬೆಂಗಳೂರಿನ PUB ಮತ್ತು Bar ಗಳ ಲೈಸೆನ್ಸ್ ರದ್ದಾಗಲಿದೆಯಾ.?
Next Article ನಟಿ ರಮ್ಯಾ ಕೊಟ್ಟ ದೂರಿನಿಂದ ಏನಾಯ್ತು ಗೊತ್ತಾ ?