ಬೆಂಗಳೂರು,ಜ.27-
ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಜಾಲದ ಐದು ಸಂಸ್ಥೆಗಳ ಮೇಲೆ CCB ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ, 6800ಕ್ಕಿಂತಲೂ ಅಧಿಕ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರದ ನ್ಯೂ ಕ್ವೆಸ್ಟ್ ಟೆಕ್ನಾಲಜಿಸ್ (New Quest Technologies), ಜೆಪಿನಗರದ ಎಸ್‍ಸಿಸ್ಟಮ್ ಕ್ವೆಸ್ಟ್ (Ssystems Quest) , ಭದ್ರಪ್ಪ ಲೇಔಟ್‍ನ ಆರೂಹಿ ಇನ್ಸ್‍ಟ್ಯೂಟ್ (Aaruhi Institute), ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜು ಮತ್ತು ವಿಜಯನಗರದ ಬೆನಕ ಕರೆಸ್ಪಾಂಡೆನ್ಸ್ ಕಾಲೇಜುಗಳ ಮೇಲೆ ಏಕಕಾಲದಲ್ಲಿ CCB ಪೊಲೀಸ್ ತಂಡ ದಾಳಿ ಮಾಡಿತು. ಈ ವೇಳೆ ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಸಂಬಂಧಿಸಿದ ಒಟ್ಟು 15 ವಿಶ್ವವಿದ್ಯಾಲಯಗಳ ವಿವಿಧ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಯುಸಿಯ ಒಟ್ಟು 6800ಕ್ಕಿಂತ ಅಧಿಕ ನಕಲಿ ಅಂಕಪಟ್ಟಿಗಳು, 22 ಲ್ಯಾಪ್‍ಟಾಪ್, ಕಂಪ್ಯೂಟರ್‌ಗಳು, ಮತ್ತು 13 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ವಿವಿಧ ಸ್ಥಳಗಳಲ್ಲಿ ಎಜುಕೇಷನ್ ಕನ್‍ಸಲ್ಟೆಂಟ್ (Educational Consultant) ಹೆಸರಿನಲ್ಲಿ ವಿವಿಧ ವಿಶ್ವವಿದ್ಯಾಲಯದ ಮತ್ತು ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿರುವ ಜಾಲದ ಬಗ್ಗೆ ಇತ್ತೀಚೆಗೆ CCB ಘಟಕ ತನಿಖೆ ನಡೆಸುತ್ತಿತ್ತು. ಆ ಸಂದರ್ಭದಲ್ಲಿ ಯಾವುದೇ ವ್ಯಾಸಂಗ ಮಾಡದೆ ಮತ್ತು ಪರೀಕ್ಷೆ ಬರೆಯದೆ ಇದ್ದರೂ ಸಹ 25ರಿಂದ 30 ಸಾವಿರ ರೂ.ಗಳಿಗೆ ಅಕ್ರಮವಾಗಿ ನಕಲಿ ಅಂಕಪ್ಟಟ್ಟಿಗಳನ್ನು ಹಾಗೂ ಪದವಿ ಸರ್ಟಿಫಿಕೇಟ್ ತಯಾರಿಸಿ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು CCB ಪೊಲೀಸರು ಕಲೆ ಹಾಕಿದ್ದರು. ರಾಜಾಜಿನಗರ, ಜೆಪಿನಗರ, ಭದ್ರಪ್ಪ ಲೇಔಟ್, ದಾಸರಹಳ್ಳಿ, ವಿಜಯನಗರದ ಸಂಸ್ಥೆಗಳವರು ವಿವಿಧ ಯೂನಿರ್ವಸಿಟಿಗಳೊಂದಿಗೆ ಶಾಮೀಲಾಗಿ ಅಥವಾ ಅವರೇ ಫೋರ್ಜರಿಯಾಗಿ ಅಂಕಪಟ್ಟಿ ತಯಾರಿಸಿ ನೀಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಿಸಿಬಿಯ ಐದು ತಂಡಗಳಿಂದ ಏಕಕಾಲದಲ್ಲಿ ಈ ಸಂಸ್ಥೆಗಳ ಮೇಲೆ ದಾಳಿ ಮಾಡಲಾಯಿತು.
ಅಣ್ಣಾಮಲೈ ಯೂನಿವರ್ಸಿಟಿಗೆ ಸಂಬಂಧಿಸಿದ 238 ನಕಲಿ ಅಂಕಪಟ್ಟಿಗಳು, ಸಿಕ್ಕಿಂ ಯೂನಿರ್ವಸಿಟಿಯ 5,497, ಗೀತಂ ಯೂನಿವರ್ಸಿಟಿಯ 728, ಬಿಐಎಸ್‍ಸಿ ಯೂನಿವರ್ಸಿಟಿಯ (BISC University) 6, ಜನಾರ್ಧನ್ ರೈನಗರ್ ಯೂನಿವರ್ಸಿಟಿಯ 2, ಐಬಿವಿಈ ಯೂನಿವರ್ಸಿಟಿಯ (IBVE University) 12, ಕುವೆಂಪು ಯೂನಿವರ್ಸಿಟಿಯ 159, ಜೈನ್ ವಿಹಾರ್ ಯೂನಿವರ್ಸಿಟಿ ಜೈಪುರ್ ನ 27, ಸಿಂಗನಿಯಾ ಯೂನಿವರ್ಸಿಟಿ ರಾಜಸ್ಥಾನದ 152, ವೆಂಕಟೇಶ್ವರ ಯೂನಿವರ್ಸಿಟಿ ಅರುಣಾಚಲಪ್ರದೇಶದ 4, ಮಂಗಳೂರು ಯೂನಿವರ್ಸಿಟಿಯ 7, ಆರ್‍ಐಓಎಸ್ ಯೂನಿವರ್ಸಿಟಿ ಛತ್ತೀಸ್‍ಘಡದ (RIOS University) 5, ಬಿಎಸ್‍ಇಹೆಚ್ ಹುಬ್ಬಳ್ಳಿಯ (BSEH) 1, ಬೆಂಗಳೂರು ವಿವಿಯ 1, ಕೆಎಸ್‍ಎಸ್‍ಎಲ್ ಯೂನಿವರ್ಸಿಟಿಯ (KSSL University) 7 ಅಂಕಪಟ್ಟಿಗಳನ್ನು ಸೇರಿದಂತೆ ಒಟ್ಟು 6846 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿರುವ CCB ಪೊಲೀಸರು ಉಳಿದ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.