ಬೆಂಗಳೂರು,ಡಿ.23- ಹೊಸ ವರ್ಷಾಚರಣೆಗೆ ದಿನಗಣನೆ (New Year 2024) ಆರಂಭಗೊಂಡ ಬೆನ್ನಲ್ಲೇ ನಗರದ ಸಂಚಾರ ಪೊಲೀಸರು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಪಾನ ಮತ್ತ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಗರದ ವಿವಿಧೆಡೆಗಳಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಒಂದೇ ರಾತ್ರಿ 2,804 ವಾಹನಗಳ ತಪಾಸಣೆ ನಡೆಸಿ 75 ಪ್ರಕರಣ ದಾಖಲಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹೆಚ್ಚಾಗುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಕಟ್ಟೆಚ್ಚರ ವಹಿಸಿ ಕಾರ್ಯಾಚರಣೆ ಆರಂಭಿಸಿದ್ದು ನಿನ್ನೆ ಒಂದೇ ರಾತ್ರಿ 2,804 ವಾಹನಗಳನ್ನು ಚೆಕ್ ಮಾಡಿದ್ದಾರೆ. 75 ಕೇಸ್ಗಳನ್ನು ದಾಖಲಿಸಿದ್ದಾರೆ.
ಹೊಸ ವರ್ಷಾಚರಣೆ ಮುಗಿಲು ಮುಟ್ಟುವ ಎಂ.ಜಿ.ರಸ್ತೆ ಬ್ರಿಗೇಡ್ ರಸ್ತೆ ಗಳಲ್ಲಿ ಸಿಸಿಟಿವಿ ಕ್ಯಾಮರಾ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು,ಎತ್ತರದ ಕಣ್ಗಾವಲು ಗೋಪುರಗಳನ್ನು ಅಳವಡಿಸಲಾಗಿದೆ. ಸಂಭ್ರಮಾಚರಣೆಗೆ ಬರುವವರನ್ನು ಹೆಚ್ಚು ಸಮಯ ಕಳೆಯಲು ಬಿಡದೇ ಕಳುಹಿಸಲು ಪೊಲೀಸರು ಮುಂದಾಗಲಿದ್ದಾರೆ.
ಕಳೆದ 3 ವರ್ಷಗಳಿಂದ ಕೋವಿಡ್ ಇದ್ದ ಹಿನ್ನೆಲೆ ಕೇವಲ 200 ರಿಂದ 300 ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಆದರೆ ಈ ಬಾರಿ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಸುಮಾರು 800 ಸಿಸಿಟಿವಿ ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸವರ್ಷದ ಮಾರ್ಗ ಸೂಚಿ:
- ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು
- ಎಂ.ಜಿ.ರಸ್ತೆ,ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ
- ರಾತ್ರಿ 7ರಿಂದ ಬಳಿಕ ಪ್ರಮುಖ ಫ್ಲೈ ಓವರ್ ಗಳು ಬಂದ್
- ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ
- ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್
- ಸೆಲೆಬ್ರೇಷನ್ ಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
- ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ
- ಬಾರ್, ಪಬ್ ಗಳಿಗೂ ರಾತ್ರಿ 1 ಗಂಟೆಗೆ ಬಂದ್ ಗೆ ಸೂಚನೆ
- ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
- ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ