ನವದೆಹಲಿ ಜ,18: ತಾವು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುತ್ತೇನೆ ಎಂಬ ಸುದ್ದಿ ಎಲ್ಲಿಂದ ಹೊರಬಿತ್ತೋ ಗೊತ್ತಿಲ್ಲ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಕ್ಷೇತ್ರಗಳ ಹಂಚಿಕೆ ಹಾಗೂ ಚುನಾವಣೆ ಕಾರ್ಯತಂತ್ರದ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ ಎಂದು ತಿಳಿಸಿದರು.
ಈ ಬಗ್ಗೆ ತಾವಿನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ಸೂಕ್ತ ನಿರ್ಣಯವನ್ನು ಎರಡು ಪಕ್ಷದ ನಾಯಕರು ಕೂತು ತೀರ್ಮಾನ ಮಾಡುತ್ತಾರೆ ಎಂದರು.
ನಾನು ಕೇಂದ್ರ ಮಂತ್ರಿಯಾಗುತ್ತೇನೆ ಎಂಬ ಸುದ್ದಿ ಯಾವ ಮೂಲದಿಂದ, ಯಾವ ಕಾರಣಕ್ಕಾಗಿ ಈ ಸುದ್ದಿ ಹುಟ್ಟುಕೊಂಡಿತು ಎಂಬುದು ಈಗಲೂ ನನಗೆ ಯಕ್ಷಪ್ರಶ್ನೆಯಾಗಿದೆ.ಚುನಾವಣೆ ಹತ್ತಿರದಲ್ಲಿ ಇದೆ. ಎರಡು ತಿಂಗಳಷ್ಟೇ ಸಮಯ ಉಳಿದಿದೆ. ಈಗ ನಾನು ಮಂತ್ರಿಯಾಗಿ ಮಾಡುವುದು ಏನಿದೆ? ಇಷ್ಟು ಅಲ್ಪ ಅವಧಿಯಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ನಾನು ಏನು ಕೆಲಸ ಮಾಡಲು ಸಾಧ್ಯ? ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅದರಿಂದ ಉಪಯೋಗವೂ ಇಲ್ಲ’ ಎಂದು ಹೇಳಿದರು.
ಕೇಂದ್ರ ಸಚಿವನಾಗಬೇಕು ಎನ್ನುವ ಆಸಕ್ತಿಯೂ ನನ್ನಲ್ಲಿ ಇಲ್ಲ. ನನಗಿರುವ ಉದ್ದೇಶ ಒಂದೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು. ಅದಷ್ಟೇ ನನ್ನ ಮುಂದಿರುವ ಎಕೈಕ ಅಜೆಂಡಾ’ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಮುಗಿದ ಮೇಲೆ ಕ್ಷೇತ್ರ ಹಂಚಿಕೆ, ಮತ್ತಿತರೆ ಪ್ರಕ್ರಿಯೆಗಳನ್ನು ಪೂರ್ಣ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಕ್ಷೇತ್ರಗಳ ಹಂಚಿಕೆಯ ಬಗ್ಗೆ ಎರಡೂ ಪಕ್ಷಗಳಲ್ಲಿ ಅತ್ಯಂತ ಸೌಹಾರ್ದ ಮನೋಭಾವನೆ ಇದೆ. ಯಾವುದೇ ಗೊಂದಲ, ಪ್ರಶ್ನೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಒಳ್ಳೆಯದಾಗಬೇಕು ಎನ್ನುವು ಏಕೈಕ ಉದ್ದೇಶದಿಂದ ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟ ಸೇರಿದೆ. ಈಗಾಗಲೇ ರಾಜ್ಯದ ಸ್ಥಿತಿಗತಿ, ಕ್ಷೇತ್ರಾವಾರು ಪರಿಸ್ಥಿತಿಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರ ಬಳಿ ಸಮೀಕ್ಷಾ ವರದಿಗಳಿವೆ. ಅದೇ ರೀತಿ ನಾವೂ ಇದೇ ರೀತಿಯ ವರದಿಗಳನ್ನು ಸಿದ್ಧ ಮಾಡಿದ್ದೇವೆ. ಎರಡೂ ಕಡೆಯ ಮಾಹಿತಿಗಳು, ವರದಿಗಳ ಬಗ್ಗೆಯೂ ಸುದೀರ್ಘವಾಗಿ, ಮುಕ್ತವಾಗಿ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.
ತಮ್ಮದು ದೊಡ್ಡ ಪಕ್ಷ, ಜೆಡಿಎಸ್ ಚಿಕ್ಕ ಪಕ್ಷ ಎನ್ನುವ ಭಾವನೆ ಅಮಿತ್ ಶಾ ಮತ್ತು ನಡ್ಡಾ ಅವರಲ್ಲಿ ಇಲ್ಲ. ಅತ್ಯಂತ ಪ್ರೀತಿ, ವಿಶ್ವಾಸ, ಸ್ನೇಹಪೂರ್ವಕವಾಗಿ ಅವರು ಮಾತುಕತೆ ನಡೆಸಿದರು. ದೇವೇಗೌಡರ ಮೇಲೆ ಅವರು ಅಪಾರ ಗೌರವ ಇರಿಸಿಕೊಂಡಿದ್ದಾರೆ. ನಮ್ಮ ಹಾಗೂ ನಮ್ಮ ಪಕ್ಷದ ನಡವಳಿಕೆಗಳನ್ನು ಬಿಜೆಪಿ ಕೇಂದ್ರದ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾವೂ ನಡೆದುಕೊಳ್ಳುತ್ತೇವೆ. ಪರಸ್ಪರ ವಿಶ್ವಾಸ, ನಂಬಿಕೆಯ ತಳಹದಿಯ ಮೇಲೆ ಈ ಮೈತ್ರಿ ಚಿರಕಾಲ ಮುಂದುವರಿಯುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


1 ಟಿಪ್ಪಣಿ
бюро дизайна интерьера бюро дизайна интерьера