ಬೆಂಗಳೂರು, ಸೆ.6 – ರಾಜ್ಯದ ಬಹುತೇಕ ಪ್ರದೇಶದಲ್ಲಿ ಬರ ಆವರಿಸಿದೆ. ಆದರೆ, ಕೇಂದ್ರ ಸರ್ಕಾರದ ಪ್ರಸ್ತುತ ಮಾನದಂಡಗಳ ಪ್ರಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರ (Drought) ಪೀಡಿತ ಪ್ರದೇಶಗಳ ಘೋಷಣೆಗೆ ನಿಗದಿ ಪಡಿಸಿದ
ಮಾನದಂಡಗಳನ್ನು ಬದಲಾಯಿಸಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ಹೊರ ಬಿದ್ದಿಲ್ಲ.ಹೀಗಾಗಿ ದೆಹಲಿಗೂ ಹೋಗಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಕಳೆದ ಆಗಸ್ಟ್18 ರವರೆಗೆ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರ ಮೂಲಕ ಮಳೆ ಕೊರತೆ ಮತ್ತು ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗಿತ್ತು. ಆ ವೇಳೆ 113 ತಾಲೂಕುಗಳಲ್ಲಿ ಬರದ ಸನ್ನಿವೇಶ ಕಂಡುಬಂದಿದೆ.
ಆದರೆ ಕೇಂದ್ರದ ಮಾರ್ಗಸೂಚಿಯ ಪ್ರಕಾರ 62 ತಾಲೂಕುಗಳು ಮಾತ್ರ ಬರದ ವ್ಯಾಪ್ತಿಗೆ ಒಳಪಡುತ್ತವೆ. ಮೊದಲ ಹಂತದ ಸಮೀಕ್ಷೆ ಬಳಿಕ ರೈತರು ಮತ್ತು ಜನಪ್ರತಿನಿಗಳು ಬೆಳೆನಷ್ಟ ಮತ್ತಷ್ಟು ದುಸ್ಥಿತಿಯಲ್ಲಿದೆ. ಹಾಗಾಗಿ ಪುನಃ ಸಮೀಕ್ಷೆ ನಡೆಸಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ 62 ತಾಲೂಕುಗಳ ಜೊತೆಗೆ ಬಾಕಿ ಇದ್ದ 51 ತಾಲೂಕುಗಳಲ್ಲೂ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಒಟ್ಟಾರೆ 83 ತಾಲೂಕುಗಳಲ್ಲೂ ಮಳೆ ಕೊರತೆ ಇದ್ದು, ಬರದ ಛಾಯೆ ಇದೆ ಎಂದು ಹೇಳಿದರು.
134 ತಾಲೂಕುಗಳಲ್ಲಿ ಮೂರ್ನಾಲ್ಕು ದಿನಗಳ್ಲಿ ಎರಡನೇ ಹಂತದ ಸಮೀಕ್ಷೆ ನಡೆಸಿ ವಾರದೊಳಗಾಗಿ ಬರ ಪರಿಸ್ಥಿತಿಯನ್ನು ಘೋಷಣೆ ಮಾಡಲು ಕೇಂದ್ರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು. ಬರ ಘೋಷಣೆ ಬಳಿಕ ರೈತರಿಗೆ ಅಲ್ಪಪ್ರಮಾಣದ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಕಾರ್ಯಪಡೆ ರಚಿಸಲಾಗುವುದು. ಅದರಿಂದ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು, ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುವುದು ಎಂದು ಹೇಳಿದರು.
ಮಳೆ ಕೊರತೆಯಿಂದಾಗಿ ಮೇವಿನ ಕೊರತೆಯೂ ಉಂಟಾಗಲಿದೆ. ಇದಕ್ಕಾಗಿ ಮೇವು ಬೆಳೆಯಲು ರೈತರಿಗೆ 20 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಡವರು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು ನರೇಗಾ ಯೋಜನೆಯಡಿ 100 ದಿನಗಳ ಬದಲಿಗೆ ಬರ ಪೀಡಿತ ತಾಲೂಕುಗಳಲ್ಲಿ 150 ದಿನ ಕೂಲಿ ಕೆಲಸ ನೀಡಲು ನಿರ್ಧರಿಸಲಾಗುತ್ತದೆ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 579 ಕೋಟಿ ರೂ. ಲಭ್ಯವಿದೆ. ಸರ್ಕಾರ ಅಗತ್ಯವಾದ ತಯಾರಿಗಳನ್ನು ಮುಂದುವರೆಸಿದೆ ಎಂದರು