ಬೆಂಗಳೂರು.
ವಿಧ್ಯಾರ್ಥಿಗಳ ಭವಿಷ್ಯದ ಮಹತ್ವದ ಘಟ್ಟ ಎಂದೇ ಪರಿಗಣಿಸಲ್ಪಟ್ಟಿರುವ ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ 2025-26ನೇ ಸಾಲಿನ ಪ್ರವೇಶಕ್ಕಾಗಿ
ಸಾಮಾನ್ಯ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ.
ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ.
ಏ.16ರಂದು ಬೆಳಿಗ್ಗೆ 10.30ರಿಂದ ಭೌತವಿಜ್ಞಾನ ಮತ್ತು ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ ಹಾಗೂ ಏ.17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿಎಸ್‌ಸಿ (ನರ್ಸಿಂಗ್) ಕೋರ್ಸ್‌ಗಳ ಪ್ರವೇಶಕ್ಕೂ ಇದೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಕ್ಕೂ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕು. ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಇದೇ ಅರ್ಜಿಯೇ ಅನ್ವಯವಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಕೇಳಿಬಂದ ಅಕ್ರಮ ಸೀಟ್ ಬ್ಲಾಕಿಂಗ್’ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಅರ್ಜಿಗೆ ಒಂದು ಮೊಬೈಲ್ ಸಂಖ್ಯೆ ಕಡ್ಡಾಯಗೊಳಿಸಿದೆ.
ಅದೇ ಸಂಖ್ಯೆಗೆ ಬರುವ ಒಟಿಪಿ ದೃಢೀಕರಿಸಿದ ನಂತರವೇ ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಪರೀಕ್ಷಾ ದಿನಾಂಕ, ಸೂಚನೆಗಳು, ಸೀಟು ಹಂಚಿಕೆ, ಪ್ರವೇಶ ಸೇರಿದಂತೆ ಎಲ್ಲ ಮಾಹಿತಿಗಳೂ ಅದೇ ಮೊಬೈಲ್ ಸಂಖ್ಯೆಗೆ ರವಾನೆಯಾಗಲಿವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ ಜ.23ರಿಂದ ಫೆ.21ರವರೆಗೆ ಅವಕಾಶ ನೀಡಲಾಗಿದೆ
.

