ಬೆಂಗಳೂರು: ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಕೋರ್ಟ್‌ನಿಂದ ಈವರೆಗೆ ನಾಲ್ಕು ಸಮನ್ಸ್ ಜಾರಿಯಾಗಿದ್ದರೂ, ಅವರು ಅದನ್ನು ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಶಿರಸಿ ಪೊಲೀಸರು ಸರ್ಕಾರಿ ಕಚೇರಿಯ ಅಂದರೆ ನಿಗಮದ ಅವರ ಚೇಂಬರ್ ಬಾಗಿಲಿಗೆ ನೋಟಿಸ್ ಅಂಟಿಸಿದ್ದಲ್ಲದೆ ಮಹಜರು ಮಾಡಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೇ ಮುಜುಗರ ತರುವಂತಹದ್ದು ಎಂಬ ಮಾತು ಕೇಳಿಬಂದಿದೆ.
ಆದರೆ ರಾಘವೇಂದ್ರ ಶೆಟ್ಟಿ ಅವರು ತಮ್ಮ ಪ್ರಭಾವ ಬಳಸಿ ಕೇಸ್ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಅಲ್ಲದೆ, ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಶ್ರೀಕಾಂತ್ ಚೌರಿ ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ ಆಪ್ತ ಸಹಾಯಕನಾಗಿದ್ದು, ಕಳೆದ ಒಂದು ವರ್ಷದಿಂದ ಅಂದರೆ ಅರೆಸ್ಟ್ ಆಗುವವರೆಗೂ ಕೆಲಸ ನಿರ್ವಹಿಸಿದ್ದಾರೆ. ಇಂತಹ ಬೆಳವಣಿಗೆಗಳು ಸರ್ಕಾರಕ್ಕೆ ಮುಜುಗರ ತರುವಂಥದ್ದು ಎಂಬ ಮಾತುಗಳು ವ್ಯಾಪಕವಾಗಿವೆ.