ಬೆಂಗಳೂರು – ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿ ಆದೇಶಿಸಿದೆ.
ಈ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದಾರೆ.
ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಕುರಿತಂತೆ ಮುಖ್ಯಮಂತ್ರಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದು, ಭ್ರೂಣ ಪತ್ತೆ ಪ್ರಕರಣದ ಗಂಭೀರತೆಯನ್ನು ಮನಗಂಡು ಈ ಪ್ರಕರಣವನ್ನು CID ತನಿಖೆಗೆ ಒಪ್ಪಿಸಲಾಗುತ್ತಿದ ಎಂದು ತಿಳಿಸಿದ್ದಾರೆ.
ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಈವರೆಗೂ 9 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರು ವಿಚಾರಣೆ ವೇಳೆ ಕಳೆದ 3 ವರ್ಷದಲ್ಲಿ 900 ಕ್ಕೂ ಹೆಚ್ಚು ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಪತ್ತೆಯಾಗಿತ್ತು. ಈ ಪ್ರಕರಣದ ಸಮಗ್ರ ತನಿಖೆಗಾಗಿ ಇದೀಗ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.
ಭ್ರೂಣ ಪತ್ತೆ ಮತ್ತು ಹತ್ಯೆ ಕೇಸ್ನಲ್ಲಿ ಇಲಾಖೆ ತನಿಖೆ ಬಾಕಿ ಇರಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಹಳೇ ನೋಟಿಸ್ ಅಂಟಿಸುವ ಮೂಲಕ ಕರ್ತವ್ಯಲೋಪ ಆರೋಪದಡಿ ಮೈಸೂರು ಟಿಹೆಚ್ಒ ರಾಜೇಶ್ವರಿ ಅಮಾನತು ಮಾಡಲಾಗಿದೆ. ಹಳೇ ನೋಟಿಸ್ ಅಂಟಿಸಿ ಆರೋಗ್ಯ ಇಲಾಖೆಗೆ ಮುಜುಗರ ತಂದಿದ್ದಾರೆ.