ಬೆಂಗಳೂರು,ಜೂ.21-ಚಿಟ್ ಫಂಡ್ ಅರಂಭಿಸಿ ಅಧಿಕ ಲಾಭದ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಖತರ್ನಾಕ್ ಮಹಿಳೆಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀವಾಣಿ ಬಂಧಿತ ಆರೋಪಿಯಾಗಿದ್ದಾರೆ. ವಾರಿಧಿ ಚಿಟ್ ಫಂಡ್ ಮಾಡುತ್ತಿದ್ದ ಲಕ್ಷ್ಮೀವಾಣಿ ಜನರನ್ನು ವಂಚಿಸಿ ಹಣ ಸಂಗ್ರಹಣೆ ಮಾಡುತ್ತಿದ್ದಳು. ಈ ಹಿನ್ನೆಲೆ ಸಾರ್ವಜನಿಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಲಕ್ಷ್ಮೀವಾಣಿಯನ್ನು ಬಂಧಿಸಿದ್ದಾರೆ.
ಲಕ್ಷ್ಮೀವಾಣಿ ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದು, ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದಳು. ಈಕೆ ತನ್ನ ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ತೆರೆದಿದ್ದಳು. ಅಲ್ಲದೇ ಈ ಕಂಪನಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದಳು.
ಚಿಟ್ ಫಂಡ್ ಉದ್ಯೋಗಿಗಳನ್ನು ನಿರ್ದೇಶಕರು ಎಂದು ಬಂದ ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದು ಅದನ್ನು ನಂಬುತ್ತಿದ್ದ ವೃದ್ಧರು ತಮ್ಮ ಜೀವನದ ಪೆನ್ಷನ್ ಹಣವನ್ನು ಲಕ್ಷ್ಮೀವಾಣಿ ಚಿಟ್ ಫಂಡ್‍ಗೆ ಹಾಕುತ್ತಿದ್ದರು. ಆದರೆ ಈಕೆ ಜನರನ್ನು ವಂಚಿಸಿ ಹಣವನ್ನು ತೆಗೆದುಕೊಂಡು ಮೋಸ ಮಾಡುತ್ತಿದ್ದಳು.
ಈ ಹಿನ್ನೆಲೆಯಲ್ಲಿ ಲಕ್ಷ್ಮೀವಾಣಿ ವಿರುದ್ಧ ಸಾರ್ವಜನಿಕರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿ ಲಕ್ಷ್ಮೀವಾಣಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.
Previous Articleರಾಷ್ಟ್ರಪತಿ ಚುನಾವಣೆ
Next Article ನಟ ದಿಗಂತ್ ಕುತ್ತಿಗೆಗೆ ಪೆಟ್ಟು: ಬೆಂಗಳೂರಿಗೆ ಏರ್‌ಲಿಫ್ಟ್