ಬೆಂಗಳೂರು,ಜ.30:
ದೇಶ- ವಿದೇಶಗಳಲ್ಲಿ ಉದ್ದಿಮೆಗಳನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್ ಗ್ರೂಪ್ ನ ಮಾಲೀಕ ಸಿ.ಜೆ.ರಾಯ್ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಆನೆಪಾಳ್ಯದಲ್ಲಿರುವ ತಮ್ಮ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿರುವ ವೇಳೆಯೇ ಸಿ.ಜೆ.ರಾಯ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.ಸದ್ಯ ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ತಮ್ಮ ಕುಟುಂಬದ ಮೇಲೆ ಪದೇ ಪದೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿದ್ದ ದಾಳಿಗೆ ಹೆದರಿ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಸಹ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
2005ರಲ್ಲಿ ಆರಂಭವಾದ ಕಾನ್ಪೀಡೆಂಟ್ ಸಂಸ್ಥೆ, ದೇಶದ ಅತ್ಯಂತ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ ಇಲ್ಲಿಯವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಈ ಮೂಲಕ ಸಿಜೆ ರಾಯ್ ಅವರು ಅತ್ಯಂತ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು. ಕರ್ನಾಟಕದ ಅತಿ ದೊಡ್ಡ ಉದ್ಯಮಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದರು.
ಮೂಲತಃ ಕೇರಳದವರಾದ ಇವರು ತಮ್ಮ ಸಂಸ್ಥೆಯ ಮೂಲಕ ವಸತಿ ಅಪಾರ್ಟ್ಮೆಂಟ್, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು
ಸಿಜೆ ರಾಯ್ ಅವರು ಸ್ವಿಟ್ಜರ್ಲೆಂಡ್‌ನ SBS ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆ ಸ್ಥಾಪಿಸಿ, ಕೇರಳ ಮತ್ತು ಬೆಂಗಳೂರಿನಲ್ಲಿ ಪ್ರಮುಖ ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ದುಬೈ ಮಾರುಕಟ್ಟೆಗೂ ವಿಸ್ತರಿಸಿದ್ದರು.
ಫಿಜೆರಾಯ್ ಅವರು ಇಂದು ಎಂದಿನಂತೆ ಆನೆ ಪಾಳ್ಯದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ್ದರು.
ತಮ್ಮ ಕಚೇರಿಯ ಸಿಬ್ಬಂದಿ ಜೊತೆ ಅವರು ಸಭೆ ನಡೆಸುತ್ತಿರುವಾಗಲೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಆನಂತರ ಐಟಿ ಅಧಿಕಾರಿಗಳು ಸುಮಾರು ಒಂದು ಗಂಟೆ ಕಾಲ ಸಿಜೆ ರಾಯ್ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ
ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಹೀಗಾಗಿ ಈ ಬಾರಿ ದಾಳಿ ವೇಳೆ ಸಿಜೆ ರಾಯ್ ತಲೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರ ಆತ್ಮಹತ್ಯೆ ಉದ್ಯಮ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

