ಬೆಂಗಳೂರು- ಬರ ಪರಿಹಾರಕ್ಕೆ ನೆರವು ಮತ್ತು ಬಜೆಟ್ ನಲ್ಲಿ ತೆರಿಗೆ ಪಾಲು ಹಂಚಿಕೆಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ನಾಳೆ ದೆಹಲಿಯಲ್ಲಿ ಪ್ರತಿಭಟನೆ (Protest) ನಡೆಸುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಎಲ್ಲಾ ಸಂಸದರು ಮತ್ತು ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತಂತೆ ರಾಜ್ಯದ ಎಲ್ಲಾ ಸಂಸದ ಮತ್ತು ರಾಜ್ಯದ ಕೇಂದ್ರ ಮಂತ್ರಿಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು ಇದು ರಾಜ್ಯದ ಹಕ್ಕು, ಸ್ವಾಭಿಮಾನ ಮತ್ತು ಗೌರವದ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಹಂಚಿಕೆ, ಸೆಸ್, ಸರ್‌ಚಾರ್ಜ್ ಮತ್ತು ವಿಶೇಷ ಅನುದಾನದ ನೀಡಿಕೆಯಲ್ಲಿ 2017ರಿಂದ ಇಲ್ಲಿಯವರೆಗೆ ರಾಜ್ಯಕ್ಕೆ 1,87,867 ಕೋಟಿ ರೂಪಾಯಿ ನಷ್ಟ ಆಗಿದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ವಿರುದ್ಧದ ಕೇಂದ್ರದ ಧೋರಣೆಯನ್ನು ವಿರೋಧಿಸುವ ಈ ಸ್ವಾಭಿಮಾನಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದಿದ್ದಾರೆ.