ದಸರಾ ಎಂದ ಕೂಡಲೇ ನಮಗೆ ತಟ್ಟನೆ ನೆನಪಾಗುವುದು ಸಾಂಸ್ಕೃತಿಕ ರಾಜಧಾನಿ ಮೈಸೂರು ಹಾಗೂ ಜಂಬೂಸವಾರಿ. ಇದರ ಬೆನ್ನಲ್ಲೇ ಕಾಣಸಿಗುವುದು ಮಂಜಿನ ನಗರಿ ಮಡಿಕೇರಿಯ ದಸರಾ ಹಾಗೂ ದಶಮಂಟಪಗಳ ವೈಭವಯುತ ಶೋಭಾ ಯಾತ್ರೆ.
ನಾಡಹಬ್ಬ ದಸರಾ ಬಂತು ಎಂದರೆ ಈ ಎರಡು ನಗರಗಳು ನವ ವಧುವಿನಂತೆ ಶೃಂಗಾರಗೊಂಡು ಆಸಕ್ತರು ಹಾಗೂ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ.ಇಲ್ಲಿ ನವರಾತ್ರಿಯ ಒಂಭತ್ತು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳು ಅನಾವರಣಗೊಳ್ಳುತ್ತವೆ.
ಮೈಸೂರಿನ ದಸರಾ ತನ್ನದೇ ಆದ ವೈಶಿಷ್ಟ್ಯ ಹೊಂದಿರುವಂತೆ ಮಂಜಿನ ನಗರ ಮಡಿಕೇರಿಯ ದಸರಾಗೂ ತನ್ನದೇ ಆದ ವಿಶಿಷ್ಟ ಪರಂಪರೆ, ಐತಿಹ್ಯ, ಹಾಗೂ ಆಕರ್ಷಣೆ ಇದೆ.
ಪ್ರತಿ ಬಾರಿ ನವರಾತ್ರಿ ಆಚರಣೆಯ ಸಮಯದಲ್ಲಿ ದಶಮಂಟಪಗಳ ವೈಭವಯುತ ಶೊಭಾಯಾತ್ರೆ ಮೂಲಕ ಗಮನ ಸೆಳೆಯುವ ಈ ದಸರಾವನ್ನು ಮತ್ತಷ್ಟು ಆಕರ್ಷಕ ಹಾಗೂ ವಿಭಿನ್ನ ರೀತಿಯಲ್ಲಿ ಮಾಡಬೇಕು ಎಂದು ಕನಸು ಕಂಡಿದ್ದು ಯುವ ಶಾಸಕ ಮಂತರ ಗೌಡ.
ಮೈಸೂರಿನ ದಸರಾ ಎಂದರೆ ನೆನಪಾಗುವುದು ಅರಮನೆ, ಚಾಮುಂಡಿ ಬೆಟ್ಟ, ದಸರಾ ಆಕರ್ಷಕ ಜಂಬೂ ಸವಾರಿ ಅದೇ ರೀತಿ ಮಡಿಕೇರಿ ದಸರಾ ಎಂದರೆ ದಶ ಮಂಟಪಗಳ ಮೆರವಣಿಗೆ .ಇದರ ಜೊತೆಗೆ ಮತ್ತೇನಾದರೂ ಮಾಡುವ ಮೂಲಕ ಗಮನ ಸೆಳೆಯಬೇಕು ಎಂದು ಶಾಸಕ ಮಂತರ ಗೌಡ ಚಿಂತನ ಮಂಥನ ನಡೆಸಿದರು.ತಮ್ಮಾಪ್ತರ ಜೊತೆಗೆ ಚರ್ಚೆ ನಡೆಸಿದರು.
ವಿಶೇಷವೆಂದರೆ ವೈದ್ಯಕೀಯ ಪದವೀಧರರಾದ ಮಂತರ ಗೌಡ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಬಂದ ನಂತರ ತಮ್ಮ ವಿಭಿನ್ನ ಶೈಲಿಯ ಆಲೋಚನೆ, ಕೆಲಸ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ವೈಖರಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಾರೆ.ಇಂತಹ ಶಾಸಕ ಮಡಿಕೇರಿ ದಸರಾ ಕೂಡ ತನ್ನಂತೆ ಎಲ್ಲರ ಗಮನ ಸೆಳೆಯಬೇಕು ಎಂದು ಆಲೋಚಿಸಿದರು.
ಈಗಾಗಲೇ ಮಡಿಕೇರಿ ದಕ್ಷಿಣ ಭಾರತದ ಕಾಶ್ಮೀರ ಎಂದು ಪ್ರಖ್ಯಾತಿ ಪಡೆದಿದೆ ಪ್ರವಾಸ ಉದ್ಯಮ ಹಾಗೂ ಇಲ್ಲಿನ ಕಾಫಿ ತೋಟಗಳು ಜಗದ್ವಿಖ್ಯಾತಗೊಳಿಸಿವೆ ಇದನ್ನೇ ಮತ್ತಷ್ಟು ಜನಪ್ರಿಯಗೊಳಿಸಬೇಕು. ಈ ಮೂಲಕ ಕೊಡಗಿನ ಕಾಫಿ, ಕಾಫಿ ಬೆಳೆಗಾರರು, ಉದ್ಯಮಿಗಳು ಸಣ್ಣ ಪುಟ್ಟ ವ್ಯಾಪಾರಿಗಳು ಕಾರ್ಮಿಕರು ಜನಸಾಮಾನ್ಯರೂ ಸೇರಿದಂತೆ ಎಲ್ಲರಿಗೂ ಇದರಿಂದ ಅನುಕೂಲವಾಗಬೇಕು ಎಂದು ಹಲವರೊಂದಿಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿ ಹೊಸ ವಿನ್ಯಾಸದೊಂದಿಗೆ ದಸರಾ ಆಚರಣೆಗೆ ಮುಂದಾದರು.
ಇವರ ಈ ಸತತ ಚಿಂತನೆ ಆಲೋಚನೆಯ ಪರಿಣಾಮವಾಗಿ ಹೊರಬಂದ ಪರಿಕಲ್ಪನೆಯೇ ಕಾಫಿ ದಸರಾ..
ಮೈಸೂರಿನ ದಸರಾ ಎಂಬ ಕೂಡಲೇ ಜಂಬುಸವಾರಿ ನೆನಪಾಗುವಂತೆ ಮಡಿಕೇರಿ ದಸರಾ ಎಂಬ ಕೂಡಲೆ ಕಾಫಿ ನೆನಪಾಗಬೇಕು. ಕೆಫೆ ಸಂಸ್ಕೃತಿ ಹೆಚ್ಚುವ ಮೂಲಕ ಕಾಫಿ ಮತ್ತು ಕಾಫಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಹಾಗೂ ಕಾಫಿ ಅಭಿರುಚಿ ಬೆಳೆಸಬೇಕು.ಇದರಿಂದ ಕಾಫಿ ಬೆಳೆಗಾರರು ಮತ್ತು ಕಾಫಿಯನ್ನು ಅವಲಂಬಿಸಿದ ಕುಟುಂಬ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಆಶಿಸಿದರು.ಇಂತಹ ಪರಿಕಲ್ಪನೆಯೊಂದಿಗೆ ಆಚರಣೆಗೆ ಬರಲು ಸಿದ್ಧವಾಯಿತು ಕಾಫಿ ದಸರಾ.
ಮಂತರ ಗೌಡ ಅವರ ವಿಶೇಷ ಏನೆಂದರೆ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಬೇಕು ಅಷ್ಟೇ ಅಲ್ಲ ಅದು ದೊಡ್ಡ ಮಟ್ಟದ ಯಶಸ್ಸು ಕಾಣಬೇಕು ಎನ್ನುವುದಾಗಿದೆ.
ಇಂತಹುದೇ ಮಹತ್ವಾಕಾಂಕ್ಷೆಯೊಂದಿಗೆ ಜಿಲ್ಲಾಡಳಿತ, ದಸರಾ ಸ್ವಾಗತ ಸಮಿತಿ ಜೊತೆಗೆ ಚರ್ಚೆ ನಡೆಸಿ ಕಾಫಿ ದಸರಾ ರೂಪುರೇಷೆಗಳನ್ನು ಸಿದ್ಧಪಡಿಸಿದರು ಆನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ನಡೆಸಿದರು ಮಂತ್ರಿಮಂಡಲದ ಹಲವು ಸಚಿವರ ಜೊತೆ ಸಮಾಲೋಚನೆ ನಡೆಸಿ ಮಡಿಕೇರಿ ದಸರಾ ಜನಮನ ಉತ್ಸವವನ್ನು ಕಾಫಿ ದಸರಾ ಎಂದು ನಾಮಕರಣ ಮಾಡಿ ಅನುಷ್ಠಾನಕ್ಕೆ ಮುಂದಾದರು.
ಯುವ ಶಾಸಕರ ನವ ಪರಿಕಲ್ಪನೆಗೆ ಕೊಡಗಿನ ಕಾಫಿ ಬೆಳೆಗಾರರು ಉದ್ಯಮಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು ಇದರ ಪರಿಣಾಮವಾಗಿ ದಸರಾ ನಡೆಯುವ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಎರಡು ದಿನಗಳ ಕಾಲ ಕಾಫಿಯ ಘಮ ಆವರಿಸಿತು.
ಜಗತ್ತಿನಲ್ಲಿ ಅತ್ಯುತ್ತಮ ಕಾಫಿ ಎಂದು ಹೆಸರು ವಾಸಿಯಾಗಿರುವ ಕರ್ನಾಟಕದ ಕಾಫಿ ಬೆಳೆಯನ್ನು ಮತ್ತಷ್ಟು ಜನಪ್ರಿಯಗೊಳಿಸಬೇಕು ಕಾಫಿ ಕುಡಿಯುವ ಸಂಖ್ಯೆ ಹೆಚ್ಚಳ ಗೊಳ್ಳುವ ಮೂಲಕ ಕಾಫಿ ಭಾರತದ ರಾಷ್ಟ್ರೀಯ ಪಾನೀಯ ಎಂದು ಘೋಷಣೆಯಾಗಬೇಕು ಎಂಬ ನಿಟ್ಟಿನಲ್ಲಿ ಕಾಫಿ ದಸರಾ ಆರಂಭಗೊಂಡಿತು.
ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿತು ಗಾಂಧಿ ಮೈದಾನದಲ್ಲಿ 32 ಮಳಿಗೆಗಳು ಕರೆದುಕೊಂಡು ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಮೀನುಗಾರಿಕೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿದವು.
ಕಾಫಿ ದಸರಾದಲ್ಲಿ ಕೇವಲ ಕಾಫಿಯ ಸ್ವಾದಿಷ್ಟ ರುಚಿಯ ಬಗ್ಗೆ ಹೇಳುವುದು ಮಾತ್ರವಲ್ಲದೆ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಅದಕ್ಕೆ ಪರಿಹಾರ ಹಾಗೆ ಕಾಫಿಯನ್ನು ವೈಜ್ಞಾನಿಕ ವಿಧಾನದಲ್ಲಿ ಹೇಗೆ ಬೆಳೆಯುವ ಮೂಲಕ ಹೆಚ್ಚು ಲಾಭದಾಯಕ ಮಾಡಿಕೊಳ್ಳಬೇಕು. ಎಂಬ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಾಗೂ ಮಾತು ಮಂಥನ ನಡೆಯಿತು.
ಇಂತಹ ಮಹತ್ವಾಕಾಂಕ್ಷೆಯ ಕಾಫಿ ದಸರಾವನ್ನು ಉದ್ಘಾಟಿಸಿದ್ದು ಕೃಷಿ ಸಚಿವ ಚೆಲುವರಾಯಸ್ವಾಮಿ.
ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕಾಫಿಯ ವಿಶೇಷತೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕೊಡಗಿಗೆ ಈ ಬಾರಿ ಇಬ್ಬರು ಯುವ ಶಾಸಕರು ಲಭಿಸಿದ್ದಾರೆ ಇದು ಈ ಎರಡು ಕ್ಷೇತ್ರಗಳಿಗೆ ಸಿಕ್ಕ ವರದಾನ. ಮಂತರ್ ಗೌಡ ಅವರಂತೂ ಬೆಳಿಗ್ಗೆಯಿಂದ ರಾತ್ರಿ ವರಗೆ ಕ್ಷೇತ್ರಕ್ಕಾಗಿ ಏನಾದರೂ ಹೊಸತು ತರಲು ತವಕಿಸುತ್ತಲೇ ಇದ್ದಾರೆ. ಇಬ್ಬರೂ ಶಾಸಕರಿಗೆ ಅಭಿನಂದನೆಗಳು, ಈ ಇಬ್ಬರ ಮೇಲೆ ನಿಮ್ಮ ಆಶೀರ್ವಾದ ನಿರಂತರವಾಗಿರಲಿ ಎಂದು ಕೊಡಗು ಜನತೆಗೆ ಹೇಳಿದರು.
ಮಡಿಕೇರಿ ದಸರಾ ಜನೋತ್ಸವ ಎಂಬ ಹಿರಿಮೆಗೆ ಪಾತ್ರವಾಗಿದ್ದು, ಇಂತಹ ದಸರಾದಲ್ಲಿ ಶಾಸಕರಾದ ಮಂತರ್ ಗೌಡ ಅವರ ಪ್ರಯತ್ನದಿಂದ ಈ ಬಾರಿ ಕಾಫಿ ದಸರಾ ಕೂಡ ಸೇರ್ಪಡೆ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಪ್ರಯತ್ನದಿಂದ ಕಾಫಿ ಮಾತ್ರವಲ್ಲದೆ ಇತರ ಕೃಷಿಗೆ ಕೂಡ ಸಹಕಾರ ದೊರಕಲಿದೆ ಬೆಳಗಾರರಿಗೆ ಪ್ರೋತ್ಸಾಹ ದೊರಕಲಿದೆ ಎಂದರು.
ಕೊಡಗು ದೇಶದಲ್ಲೇ ವಿಭಿನ್ನ ಜೀವ ಸಂಸ್ಕೃತಿಯ ನೆಲ, ವೀರ ಯೋಧರ ನಾಡು. ಸೇನಾ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ,ಜನರಲ್ ತಿಮ್ಮಯ್ಯ ಸೇರದಂತೆ ಅನೇಕ ಮಹನೀಯರು ಈ ದೇಶದ ರಕ್ಷಣೆಗೆ ನೀಡಿರುವ ಸೇವೆ ಅನನ್ಯವಾದದ್ದು. ಹಾಗೇ ಹಾಕಿ ಕ್ರೀಡೆಗೂ ಕೊಡಗು ದೊಡ್ಡ ಕೊಡುಗೆ ನೀಡುತ್ತಲೇ ಬಂದಿದೆ. ಜೀವ ನದಿ ಕಾವೇರಿಯ ಉಗಮವೂ ಇದೇ ಪುಣ್ಯ ಭೂಮಿಯಲ್ಲಿ ಅಗಿರುವುದು ನಮಗೆಲ್ಲ ಹೆಮ್ಮೆ. ಇಂತಹ ನೆಲದಲ್ಲಿ ನಡೆಯುವ ದಸರಾ ಆಚರಣೆಯನ್ನು ಕಾಫಿ ದಸರಾ ಎಂದು ಪರಿಚಯಿಸಲು ಹೊರಟಿರುವ ಶಾಸಕ ಮಂತರ ಗೌಡ ಅವರ ಪ್ರಯತ್ನ ಯಶಸ್ವಿಯಾಗಲಿ ಮಡಿಕೇರಿ ದಸರಾ ಕಾಫೀ ದಸರಾ ಎಂದೇ ಪ್ರಸಿದ್ಧಿಯಾಗಲಿ ಎಂದು ಆಶಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಕೊಡಗಿನವರೇ ಆದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಮಾತನಾಡಿ, ಕಾಫಿ ಸೇವನೆಯಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ಪ್ರವಾಸಿಗರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು. ‘ಬದಲಾವಣೆಗೆ ಹೊಂದಿಕೊಂಡು ಹೋಗುವಾಗ ನಮ್ಮ ಮೂಲ ಸಂಸ್ಕೃತಿ ಬಿಡಬಾರದು. ವಾಣಿಜ್ಯಕರಣ ನಿಲ್ಲಿಸಲು ಆಗುವುದಿಲ್ಲ. ಒಂದು ವೇಳೆ ನಿಲ್ಲಿಸಿದರೆ ನಾವು ಹಿಂದೆ ಬೀಳುತ್ತೇವೆ. ಆದರೆ ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಕೊಡಗಿನಲ್ಲಿ ಸಮತೋಲನ ಅಭಿವೃದ್ದಿ ಆಗಬೇಕು’ ಎಂದು ಪ್ರತಿಪಾದಿಸಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ. ದಿನೇಶ್ ಮಾತನಾಡಿ ಕಾಫಿಯನ್ನು ಜನಪ್ರಿಯಗೊಳಿಸುವ ದೃಷ್ಟಿಯಿಂದ ಮಣ್ಣಿನಿಂದ ಮಾರುಕಟ್ಟೆಯ ವರೆಗೆ ಎಂಬ ವಿಶೇಷ ಯೋಜನೆಯನ್ನು ಕಾಫಿ ಮಂಡಳಿ ಹಮ್ಮಿಕೊಂಡಿದೆ ಇದಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕಾಫಿ ದಸರಾ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾಫಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಬಹುದು. ಆದರೆ, ನಮ್ಮಿಂದ ಕಾಫಿ ಬೆಳೆಯುವುದನ್ನು ಕಲಿತ ವಿಯಟ್ನಾಂ ಇಂದು ನಮಗಿಂತ ಹೆಚ್ಚು ಇಳುವರಿ ತೆಗೆಯುತ್ತಿದೆ. ಮಾತ್ರವಲ್ಲ, ನಮ್ಮಲ್ಲೂ ಧರ್ಮರಾಜ್ ಅವರಂತಹ ಪ್ರಗತಿಪರ ಬೆಳೆಗಾರರು ಅಧಿಕ ಇಳುವರಿ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
ಹಲವಾರು ಮಂದಿ ಬೆಳೆಗಾರರು ಕಾಫಿ ದಸರಾ ಬಗ್ಗೆ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಯುವ ಶಾಸಕರ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಫಿ ದಸರಾದಲ್ಲಿ ತಮ್ಮ ಸ್ಟಾಲ್ ಗಳನ್ನು ಹಾಕಿಕೊಂಡಿದ್ದ ಪ್ರತಿಷ್ಠಿತ ಕಾಫಿ ಉದ್ದಿಮೆಗಳ ಮುಖ್ಯಸ್ಥರು ಕೂಡ ಈ ಹೊಸ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ಷದಿಂದ ವರ್ಷಕ್ಕೆ ಇದು ಮತ್ತಷ್ಟು ವಿಸ್ತರಣೆ ಯಾಗುವ ಮೂಲಕ ಕೊಡಗಿನ ದಸರಾ ಕಾಫೀ ದಸರವಾಗಿ ಜನಪ್ರಿಯಗೊಳ್ಳಬೇಕು ಎಂದು ಆಶಿಸಿದರು.
ಇಂತಹ ಒಂದು ವಿನೂತನ ಪ್ರಯೋಗ ಮಾಡುವ ಮೂಲಕ ಯಶಸ್ವಿಯಾದ ಶಾಸಕ ಮಂತರ ಗೌಡ ಮಾತನಾಡಿ, ಮಾರುಕಟ್ಟೆಯಲ್ಲಿ ಕಾಫಿ ದರ ಉತ್ತಮವಾಗಿದ್ದರೂ ಸಹ ಬೆಳೆಗಾರರು ಸಾಲಗಾರರಾಗಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸಿ ಅಗತ್ಯ ಸಹಕಾರ ಸಹಾಯಧನ ಕಲ್ಪಿಸಬೇಕು ಎಂಬ ದೃಷ್ಟಿಯಿಂದ ಸರ್ಕಾರದ ಗಮನ ಸೆಳೆಯಲು ಈ ದಸರಾ ಸಹಕಾರಿಯಾಗಿದೆ ಎಂದು ಹೇಳಿದರು.
ದಸರಾ ಎಂದರೆ ಕೇವಲ ನವರಾತ್ರಿಯ ಆಚರಣೆ ಸಾಂಸ್ಕೃತಿಕ ಸಂಭ್ರಮ ಮಾತ್ರವಲ್ಲ ಅದು ಈ ನಾಡಿನ ಅಸ್ಮಿತೆ ಜನರ ಜೀವನಾಡಿಯಾಗಬೇಕು ಎಂಬ ದೂರ ದೃಷ್ಟಿಯಿಂದ ಮಾಡಿರುವ ಈ ಪ್ರಯೋಗ ಯಶಸ್ವಿಯಾಗಬೇಕು ಮಂತರ ಗೌಡ ಇರಲಿ ಇಲ್ಲದಿರಲಿ ಕಾಫಿ ದಸರಾ ಮುಂದುವರಿಯಬೇಕು ಆ ಮೂಲಕ ಮಡಿಕೇರಿ ದಸರಾ ಎಂದರೆ ಕಾಫಿ ದಸರಾ ಎಂದು ಪ್ರಸಿದ್ಧಿಯಾಗಬೇಕು. ಇದರ ಮೂಲಕ ಈ ವೀರಭೂಮಿಯ ಬಹುಮುಖಿ ಸಂಸ್ಕೃತಿ ಜನಜೀವನ ಜಗತ್ತಿನ ಗಮನ ಸೆಳೆಯಬೇಕು ಎಂದು ಆಶಿಸಿದರು.